



ಕಡಬ ಪಟ್ಟಣ : ಇಲ್ಲಿನ ಪಟ್ಟಣ ಪಂಚಾಯ್ತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಮಡ್ಯಡ್ಕ-ಬೊಳ್ಳೆಕುಕ್ಕು-ಚಾಕೋಟೆ ರಸ್ತೆ ತೀರ ಹದಗೆಟ್ಟಿದ್ದು ಸಮರ್ಪಕವಾಗಿ ದುರಸ್ತಿಗೊಳಿಸದಕ್ಕೆ ವಾರ್ಡಿನ ಜನರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಪ.ಪಂ ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನೂ ನೀಡಿದ್ದಾರೆ.
ರಸ್ತೆಯ ಅವ್ಯವಸ್ಥೆಯಿಂದಾಗಿ ಈ ಭಾಗದ ಜನರು ಬಾಡಿಗೆಗೆ ಆಟೋ ಕರೆದರೂ ಬರುತ್ತಿಲ್ಲ, ತುರ್ತು ಸಂದರ್ಭಕ್ಕೂ ಅಡಚಣೆಯಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆ. ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಹದಗೆಟ್ಟ ರಸ್ತೆಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಲಾಗಿತ್ತು. ಹೀಗಾಗಿ ಅಧಿಕಾರಿ ವರ್ಗ ಸಹಿತ ಜನನಾಯಕರು ಆಗಮಿಸಿ ರಸ್ತೆ ದುರಸ್ತಿಗೆ ಸೈ ಎಂದಿದರು.
ನಂತರ ಅನುದಾನ ಬಿಡುಗಡೆಯಾದರೂ ರಸ್ತೆಯನ್ನು ನಿರೀಕ್ಷಿತ ಮಟ್ಟದಲ್ಲಿ ದುರಸ್ತಿಗೆ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಲ್ಲಿನ ನಿವಾಸಿಗಳ ಆಗ್ರಹದ ಮೇರೆಗೆ ರಸ್ತೆ ದುರಸ್ತಿಗೆ ಮುಂದಾಗಿದ್ದು ಪೂರ್ಣಗೊಳಿಸಿಲ್ಲ. ಜೊತೆಗೆ ರಸ್ತೆಗೆ ದುರಸ್ತಿಗೆ ತಂದಿರುವ ಕಚ್ಚಾ ವಸ್ತುಗಳನ್ನು (ವೆಟ್‌ಮಿಕ್ಸ್ ಜಲ್ಲಿ) ಬೇರೆ ಕಡೆಗೆ ಕೊಂಡುಹೋಗಿರುವುದಾಗಿ ಹೇಳಲಾಗಿದೆ.
ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡದ ಬಗ್ಗೆ ದ.ಕ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದ್ದು ಅದರಂತೆ ಸ್ಥಳಕ್ಕೆ ಪ.ಪಂ ಅಧಿಕಾರಿಗಳು ಆಗಮಿಸಿ ಪರಿಶೀಲನೆಯನ್ನೂ ಮಾಡಿದ್ದಾರೆ . ಇನ್ನು ಪ.ಪಂ ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತಯಾಚನೆಗೆ ಬರುತ್ತಿದ್ದು ಅವರ ರಸ್ತೆ ವಿಚಾರವಾಗಿ ವಾರ್ಡು ನಿವಾಸಿಗಳು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.
ಪ.ಪಂ ಗೆ ಮನವಿ : ಸುಮಾರು 50 ವರ್ಷಗಳಿಂದ ಸಣ್ಣಪುಟ್ಟ ಕಾಮಗಾರಿಗಳು ನಡೆದದ್ದು ಬಿಟ್ಟರೆ ಹೆಚ್ಚಿನ ಅಭಿವೃದ್ಧಿಯೇ ಕಾಣದ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಮಡ್ಯಡ್ಕ-ಬೊಳ್ಳೆಕುಕ್ಕು, ಚಾಕೋಟೆ ರಸ್ತೆಯು ತೀರಾ ಹದಗೆಟ್ಟಿರುತ್ತದೆ. ಸದ್ರಿ ರಸ್ತೆಯಲ್ಲಿ ಎರಡು ಬದಿಗಳಲ್ಲಿ ಗಿಡಗಳು ಬೆಳೆದು, ರಸ್ತೆಯ ಎರಡು ಬದಿಗಳಲ್ಲಿ ಮಳೆಯ ನೀರು ಹರಿದು ಹೋಗದಂತೆ ಆಗಿರುತ್ತದೆ. ಈ ರಸ್ತೆಯಲ್ಲಿ ಸಂಚಾರಿಸುವ ಶಾಲಾ ಮಕ್ಕಳು, ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿನ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಕಳೆದ ವರ್ಷ ಪುತ್ತೂರು ಉಪ ಆಯುಕ್ತರಾದ ಜುಭೀನ್ ಮೊಹಪಾತ್ರರವರು ಇಲ್ಲಿಗೆ ಭೇಟಿ ನೀಡಿ ಈ ರಸ್ತೆಯನ್ನು ಸರಿಪಡಿಸುವಂತೆ ಮತ್ತು ಚರಂಡಿ ದುರಸ್ಥಿ ನೀರು ಹರಿಯುತ್ತಿರುವ ಚರಂಡಿಯಲ್ಲಿ ಹಾಕಿರುವ ವಿದ್ಯುತ್ ಕಂಬಗಳ ತೆರವು, ವಿದ್ಯುತ್ ಕಂಬಗಳ ಮೇಲೆ ಬಗ್ಗಿರುವ ಮರಗಳ ತೆರವು, ಪಂಚಾಯತ್ ರಸ್ತೆಯನ್ನು ಅತಿಕ್ರಮಣ ಮಾಡಿದವರಿಗೆ ಹಾಗೂ ಮಣ್ಣು ಹಾಕಿ ನೀರಿನ ಹರಿವಿಗೆ ತೊಂದರೆ ಮಾಡಿದವರಿಗೆ ನೋಟೀಸ್ ನೀಡುವಂತೆ ಮೆಸ್ಕಾಂ, ಅರಣ್ಯ, ಕಂದಾಯ, ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಹಿನ್ನಲೆಯಲ್ಲಿ ಆ ವರ್ಷ ರಸ್ತೆಯನ್ನು ಸ್ವಲ್ಪ ಮಟ್ಟಿಗೆ ದುರಸ್ಥಿ ಮಾಡಲಾಗಿತ್ತು. ನಂತರದಲ್ಲಿ ಯಾವುದೇ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳದೆ ಇಂದಿಗೂ ಈ ರಸ್ತೆಯಲ್ಲಿ ಸಮಸ್ಯೆಗಳು ಎದುರಾಗಿದೆ. ಆದುದರಿಂದ ತಾವುಗಳು ಈ ರಸ್ತೆಯನ್ನು ಮಳೆಗಾಲಗಿಂತ ಮುಂಚಿತವಾಗಿ ಸರಿಪಡಿಸಲು ಕ್ರಮಕೈಗೊಳ್ಳಬೇಕಾಗಿ ಕೇಳಿಕೊಂಡಿದ್ದರು.