Grant Sanctioned :ಐತಿಹಾಸಿಕ ಕೆದ್ದೊಟ್ಟೆ ಕೆರೆ ಅಭಿವೃದ್ದಿಗೆ ಅನುದಾನ ಬಿಡುಗಡೆ

Grant Sanctioned :ಐತಿಹಾಸಿಕ ಕೆದ್ದೊಟ್ಟೆ ಕೆರೆ ಅಭಿವೃದ್ದಿಗೆ ಅನುದಾನ ಬಿಡುಗಡೆ

Kadaba Times News

ಕಡಬ: ಮಾಜಿ ಶಾಸಕ ಎಸ್.ಅಂಗಾರರ ಅವಧಿಯಲ್ಲಿ  ಸಣ್ಣ ನೀರಾವರಿ ಇಲಾಖೆಯ ಮುಖಾಂತರ ಕುಂತೂರು ಗ್ರಾಮದ ಕೆದ್ದೊಟ್ಟೆ ಕೆರೆ ಅಭಿವೃದ್ಧಿಗಾಗಿ ಹೂಳೆತ್ತಲು ಒಂದು ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದರೂ ಅದರ ಟೆಂಡರ್ ಪಡೆಯಲು ಯಾರೂ ಮುಂದೆ ಬಾರದೆ ಕೆರೆ ಹೂಳೆತ್ತುವ ಅಭಿವೃದ್ಧಿ ಪಡಿಸುವ ಮಾತು ದೂರವೇ ಉಳಿದಿತ್ತು.  

ಈ ಸುದ್ದಿಯನ್ನು ಓದಿರಿ:  ಕಡಬದ ಐತಿಹಾಸಿಕ ಕೆದ್ದೊಟ್ಟೆ ಕೆರೆ ಅಭಿವೃದ್ದಿಗೆ ಅನುದಾನ ಬಿಡುಗಡೆ

ಇದೀಗ ಮತ್ತೊಮ್ಮೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಅವಧಿಯಲ್ಲಿ ಕಡಬ ತಾಲೂಕಿನ  ಪುರಾತನ ಕೆದ್ದೊಟ್ಟೆ ಕೆರೆ ಅಭಿವೃದ್ಧಿಗೆ   1.25 ಲಕ್ಷ  ಅನುದಾನ ಬಿಡುಗಡೆಯಾಗಿದೆ. ಇನ್ನಾದರೂ ಕೆರೆ ಅಭಿವೃದ್ಧಿಗೆ ಚಾಲನೆ ದೊರೆಯಬಹುದೆಂಬ ವಿಶ್ವಾಸ ಇಲ್ಲಿನ ಗ್ರಾಮಸ್ಥರದ್ದಾಗಿದೆ.



ಕಾಮಗಾರಿಯ ವೆಚ್ಚವು ಯಾವುದೇ ಕಾರಣಕ್ಕೂ ಅನುಮೋದಿಸಿದ ಮೊತ್ತಕ್ಕಿಂತ ಹೆಚ್ಚಾಗಬಾರದು  ಹಾಗೂ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸತಳಿಸಬೇಕು.  ಒಂದು ವೇಳೆ ಸ್ಥಳ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಳ ನಿರೀಕ್ಷಿಸಿದಲ್ಲಿ ವಿನ್ಯಾಸ ಬದಲಾವಣೆಯಿಂದಾಗಿ ಅಥವಾ ಬೇರೆ ಕಾರಣದಿಂದ ಅನುಮೋದಿಸಿದ ಅಂದಾಜು ಮೊತ್ತ ಹೆಚ್ಚಾಗುವ ಸಂಭವ ಇದ್ದಲ್ಲಿ, ತಕ್ಷಣ ಪರಿಷ್ಕೃತ ಅಂದಾಜಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ನಂತರ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಮತ್ತು ಅಭಿವೃದ್ದಿ ಇಲಾಖೆಯ ಅಧೀನ ಕಾರ್ಯದರ್ಶಿ ವೀನಾ ವೈ ಎನ್ ಆದೇಶ ಹೊರಡಿಸಿದ್ದಾರೆ.


ಕುಂತೂರು ಗ್ರಾಮದ  ರೈತರ ಕೃಷಿ ಬದುಕಿನ ನೀರು ಯಾವ ಬರಗಾಲದಲ್ಲೂ ಇಲ್ಲಿ ನೀರು ಆರಿಲ್ಲ.  ಹಿಂದೆ  15 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದ   ಕೆರೆ ಈಗ ಹತ್ತು ಎಕರೆಗೆ ಇಳಿದಿದೆ.  ಈಗ ಕೆರೆಯ ತಳ ಭಾಗ ಎದ್ದು ಕಾಣುತ್ತಿದೆಇದರಲ್ಲಿದ್ದ ನೂರಾರು ಜಾತಿಯ ಮೀನುಗಳು  ಕೆರೆಯ ಬದಿಯಲ್ಲಿರುವ ಮರಗಳಲ್ಲಿ ದೂರದ ಊರುಗಳಿಂದ   ಬಂದು ನೆಲೆ ನಿಂತಿರುವ ಸಾವಿರಾರು ಬಕ ಪಕ್ಷಿಗಳ ಆಹಾರವಾಗಿತ್ತು.  ಈ ಕರೆಯಲ್ಲಿ ಹತ್ತಕ್ಕೂ ಹೆಚ್ಚು ಪಂಪ್ಸೆಟ್ಗಳು ನೀರೆತ್ತಿದರೂ ಕೆರೆ ಬತ್ತುತ್ತಿರಲಿಲ್ಲ. ಹತ್ತು ವರ್ಷಗಳ ಹಿಂದೆ ಪರಿಯ ಸನ್ನಿವೇಶ ನಿರ್ಮಾಣವಾಗಿದ್ದರೂ   ಕೆರೆ ಬರಿದಾದ ಉದಾಹರಣೆಗಳು ಇಲ್ಲ  ಆದರೆ ಕಳೆದ ವರ್ಷ  ಮಾತ್ರ ಕೆರೆ ಬರಿದಾಗಿದ್ದು,  ಕೆರೆಯ ಮಧ್ಯೆ ಹೂಳು ತುಂಬಿದ ಕೆಸರು ನೀರು ಸ್ವಸಲ್ಪ ಮಟ್ಟಿಗೆ ಕಾಣಿಸಿಕೊಂಡಿತ್ತು. 



ನೀರಿನ ಮೂಲಬರಿದಾಗುತ್ತಿದ್ದಂತೆ ಕೆರೆಯ ನೀರನ್ನು ಬಳಸುತ್ತಿದ್ದ ಹತ್ತಕ್ಕೂ ಹೆಚ್ಚು ರೈತರು ಪ್ರತಿಯೊಬ್ಬರೂ ಕೊಳವೆ ಬಾವಿ ಕೊರೆಸಿದರೂ ಅದು ಸಫಲವಾಗಲಿಲ್ಲ. ಒಂದರೆಡು ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಬರುತ್ತಿದ್ದರೆ ಇನ್ನುಳಿದವುಗಳೆಲ್ಲಾ ವಿಫಲವಾಗಿತ್ತು.  ಈ ವರ್ಷ  ವರ್ಷ ಜನವರಿಯಿಂದಲೇ ಆಗಾಗ ಮಳೆಯಾಗುತ್ತಿದುದ್ದರಿಂದ ಕೆರೆಯಲ್ಲಿ ನೀರಿದೆ.  ಕೆರೆಯನ್ನು ಹೂಳೆತ್ತದೆ  ಇರುವುದೂ ಕೂಡಾ ಕೆರೆ ನೀರು ಇಲ್ಲದಂತಾಗಲು ಕಾರಣವಾಗಿದೆ.  



ಕುಂತಿ ನಡೆದಾಡಿದ ಕುಂತೂರು:  ಮಹಾಭಾರತದ ಪಾಂಡವರ ತಾಯಿ ಕುಂತಿ ಈ ಊರಿನಲ್ಲಿ ನಡೆದಾಡಿರುವುದರಿಂದ ಇಲ್ಲಿಗೆ ಕುಂತೂರು ಎನ್ನುವ ಹೆಸರು ಬಂದಿದೆ ಎನ್ನುವುದು ನಂಬಿಕೆ. ಪಾಂಡವರು ವನವಾಸ ನಡೆಸಿದ ಸಂದರ್ಭ ಇಲ್ಲಿಗೆ ಆಗಮಿಸಿದ್ದರು ಎನ್ನುವ ಪ್ರತೀತಿ ಇದೆ.  ಧರ್ಮರಾಯನಿಗೆ ಯಮ ಧರ್ಮರಾಯ ಯಕ್ಷ ಪ್ರಶ್ನೆ ಕೇಳಿದ ಜಾಗ ಇದು ಎಂದೂ ಹೇಳಲಾಗುತ್ತಿದೆ.  ಕೆದ್ದೊಟ್ಟೆ ಕೆರೆಯನ್ನು ಭೀಮಸೇನ ನಿರ್ಮಿಸಿದ್ದನಂತೆ.  ಕೆರೆಯ ದಕ್ಷಿಣ ಭಾಗದಲ್ಲಿ ಎತ್ತರವಾದ ಗುಡ್ಡವಿದೆ. ಭೀಮ ಕೆರೆ ನಿರ್ಮಾಣ ಮಾಡುವಾಗ ಮಣ್ಣು ತೆಗೆದು ರಾಶಿ ಹಾಕಿರುವುದರಿಂದ ಈ ಗುಡ್ಡ ನಿರ್ಮಾಣವಾಗಿದೆ. ಭೀಮ ನಿರ್ಮಾಣ ಮಾಡಿದ್ದರಿಂದ ಇದನ್ನು ಮಾಲ್ತಿಗುಡ್ಡೆ (ಮಾಡಿದ ಗುಡ್ಡೆ) ಎಂದು ಹೇಳಲಾಗುತ್ತದೆ.  ಇದರ ಪಕ್ಕದಲ್ಲೇ ನಿಶಾನಿ ಗುಡ್ಡೆ ಎನ್ನುವ ಗುಡ್ಡವಿದ್ದು, ಇಂದಿಗೂ ಈ ಗುಡ್ಡದಿಂದ ಮಾಲ್ತಿಗುಡ್ಡೆಗೆ ನವಿಲುಗಳು ಹಾರಿ ನರ್ತನ ಮಾಡುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.


ಪಕ್ಕದಲ್ಲೇ ಕುಮಾರಧಾರ ನದಿ ಹರಿಯುತ್ತಿದ್ದು ಇಲ್ಲಿನ ಉರುಂಬಿ ಎಂಬಲ್ಲಿ ದ್ರೌಪದಿ ಬಟ್ಟೆ ಒಗೆದ ವಿಶಾಲವಾದ ಕಲ್ಲು, ಬಟ್ಟೆ ಒಣಗಿಸಿದ ಕುರುಹುಗಳಿವೆ. ಇಲ್ಲಿ ಪಾಂಡವರು ವಾಸಿಸುತ್ತಿದ್ದ ಗುಡಿಸಲು ಇತ್ತು. ಹಿಂದೆ ಈ ಪ್ರದೇಶವನ್ನು ಆಳಿದ ಬಲ್ಲಾಳ ವಂಶಸ್ಥರು ಗುಡಿ ನಿರ್ಮಿಸಿದ್ದರು.  ಇದರಲ್ಲಿ ಪಾಂಡವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಇಂದಿಗೂ ಇಲ್ಲಿ ಶ್ರೀ ಕೃಷ್ಣನ ಸಾನಿಧ್ಯ ನೆಲೆಗೊಳಿಸಿ ದ್ರೌಪದಿ ಹಾಗೂ ಪಾಂಡವರ ಮೂರ್ತಿಗಳನ್ನು ಪುನರ್‌ಪ್ರತಿಷ್ಠಾಪಿಸಿ ಇಲ್ಲಿನ ಜನ ಆರಾಧಿಸುತ್ತಿದ್ದಾರೆ. ರಾಜ್ಯದಲ್ಲಿ ಪಂಚ ಪಾಂಡವರನ್ನು ಆರಾಧಿಸಿಕೊಂಡು ಬರುವ ಏಕೈಕ ಕ್ಚೇತ್ರ ಇಲ್ಲಿದೆ.

ಕೆದ್ದೊಟ್ಟೆ ಕೆರೆಯ ಪಕ್ಕದಲ್ಲಿರುವ ಮಾಲ್ತಿಗುಡ್ಡೆಗೆ ಬೆಂಕಿ ಬಿದ್ದಾಗ ಅಲ್ಲಿ ಸಂಕಷ್ಟದಲ್ಲಿ ನಾಗರ ಹಾವನ್ನು ಚಲ್ಲಮೇರ ಎಂಬ ವ್ಯಕ್ತಿ ರಕ್ಷಣೆ ಮಾಡಿ ಇದೇ ಕೆರೆಗೆ ಬಿಟ್ಟಿದ್ದನಂತೆ. ಪ್ರತಿಯಾಗಿ ನಾಗ ಚಲ್ಲನನ್ನು ಸನ್ಮಾನ ಮಾಡಲು 18 ಕೈಗಳಿರುವ ಚಿನ್ನ ತುಂಬಿದ ಕೊಪ್ಪರಿಗೆಯನ್ನು ಕೊಡಲು ಹೋದಾಗ ಚಲ್ಲ ಹೆದರಿ ಓಡಿ ಹೋದ ಕಿಂಡಿಯನ್ನೇ ಚಲ್ಲಮೇರ ಗಂಡಿ ಎಂದು ಕರೆಯಲಾಗುತ್ತಿದ್ದು, ಚಲ್ಲಮೇರ ಸ್ವೀಕರಿಸದೇ ಉಳಿದಿರುವ ಕೊಪ್ಪರಿಗೆಯನ್ನು ನಾಗ ಕೆರೆಯಲ್ಲೇ ಬಿಟ್ಟಿದ್ದಾನೆ. ಅಲ್ಲಿಂದ ಆತ ಓಡಿ ಹೋದ ಗಂಡಿಯನ್ನು ಚಲ್ಲ ಮೇರನ ಗಂಡಿ ಎಂದು ಕರೆಯಲಾಗುತ್ತದೆ. ಇಲ್ಲಿ ಕೊಪ್ಪರಿಗೆ ಹಾಗೂ ನಾಗದೇವರ ಸಾನಿಧ್ಯ ಇದೆ ಎಂದು ನಂಬಲಾಗುತ್ತಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top