



ಕಡಬ ಟೈಮ್ಸ್ ( KADABA TIMES): ವಾಹನವೊಂದು ಮಣ್ಣಿನ ರಸ್ತೆಯಲ್ಲಿ ಹೂತು ಹೋಗಿದ್ದ ವೇಳೆ ಚಾಲಕನ ಜೊತೆ ಮಾತನಾಡುತ್ತಿದ್ದ ಸಂದರ್ಭ ವ್ಯಕ್ತಿಯೊಬ್ಬ ತನಗೆ ಚಾಕು ತೋರಿಸಿ ಜೀವಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ಆಲಂಕಾರು ನಿವಾಸಿ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಆಲಂಕಾರು ಗ್ರಾಮದ ನಾರ್ತಿಲದ ಪ್ರೀತಂ ಎಂಬವರು ಕಮ್ಮಿತ್ತಿಲು ನಿವಾಸಿ ಲೋಕೇಶ್ ಗೌಡ ಎಂಬವರ ವಿರುದ್ಧ ನೀಡಿರುವುದಾಗಿದೆ.
ಪ್ರೀತಂ ಅವರ ಕೋಳಿಫಾರಂಗೆ ಆ.7ರಂದು ಸಂಜೆ 3 ಗಂಟೆಗೆ ಕೋಳಿ ಆಹಾರವನ್ನು ತೆಗೆದುಕೊಂಡು ಬಂದ ಲಾರಿ ಕೋಳಿ ಆಹಾರವನ್ನು ಖಾಲಿ ಮಾಡಿ ವಾಪಾಸು ಹೋಗುವ ವೇಳೆ ರಸ್ತೆಯ ಮಣ್ಣಿನಲ್ಲಿ ಹೂತು ಬಾಕಿಯಾಗಿತ್ತು. ಲಾರಿಯನ್ನು ಬೇರೆ ವಾಹನ ತರಿಸಿ ಎಳೆಯುವ ಬಗ್ಗೆ ಲಾರಿ ಚಾಲಕನೊಂದಿಗೆ ಮಾತನಾಡುತ್ತಿದ್ದಾಗ ತನ್ನನ್ನು ಮತ್ತು ಲಾರಿ ಚಾಲಕನನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಕೈಯಲ್ಲಿದ್ದ ಚಾಕುವನ್ನು ತೋರಿಸಿ ಕೈಯಿಂದ ಪ್ರೀತಂರವರ ಕುತ್ತಿಗೆಯನ್ನು ಹಿಡಿದು ಗೋಡೆಗೆ ದೂಡಿ ಹಾಕಿದ ಪರಿಣಾಮ ಬೆನ್ನಿಗೆ ಗೋಡೆ ತಾಗಿ ನೋವು ಉಂಟಾಗಿದೆ ಎಂದು ಉಲ್ಲೇಖಿಸಿದ್ದಾರೆ.
ದೂರುದಾರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 115(2) 352, 351(3)
352 BNS-2023 ಯಂತೆ ಪ್ರಕರಣ ದಾಖಲಾಗಿದೆ.