



ಕಡಬ ಮತ್ತು ಸುಳ್ಯ ಉಭಯ ತಾಲೂಕಿನ ಗ್ರಾಮಗಳಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ತೆಂಗಿನಕಾಯಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಡಬದ ಕೊಂಬಾರು, ಸಿರಿಬಾಗಿಲು, ಮರ್ಧಾಳ, ಕೋಡಿಂಬಾಳ, ನೆಟ್ಟಣ, ನೂಜಿಬಾಳ್ತಿಲ, ಕೊಣಾಜೆ, ಇಚ್ಲಂಪಾಡಿ, ನೆಲ್ಯಾಡಿ, ಸುಳ್ಯದ ಅರಂತೋಡು, ಮಂಡೆಕೋಲು, ಉಬರಡ್ಕ, ಗುತ್ತಿಗಾರು, ಪಂಜ ಸೇರಿದಂತೆ ಹಲವಾರು ಕಡೆಗಳಲ್ಲಿ ತೆಂಗಿನ ತೋಟಗಳಿಗೆ ಮಂಗಗಳು ಗುಂಪಾಗಿ ಬಂದು, ಹಸಿರು ತೆಂಗಿನ ಕಾಯಿಗಳನ್ನು ಕಿತ್ತು ನೆಲಕ್ಕೆ ಬಿಸಾಡಿ ಹಾನಿ ಮಾಡುತ್ತಿವೆ.
ಕೃಷಿಕರ
ಪ್ರಕಾರ, ಕಳೆದ ಕೆಲವು ವಾರಗಳಿಂದ ಮಂಗಗಳ ದಾಳಿ ತೀವ್ರಗೊಂಡಿದ್ದು, ನೂರಾರು ತೆಂಗಿನಕಾಯಿಗಳು ನಾಶವಾಗಿವೆ. ಮಂಗಗಳು ತೆಂಗಿನಕಾಯಿ, ಬಾಳೆಹಣ್ಣು, ಹೂಗಳು ಸೇರಿದಂತೆ ಬೆಳೆ ಹಾನಿ ಮಾಡುವುದು ಮಾತ್ರವಲ್ಲದೆ, ಮನೆಗಳ
ಸುತ್ತಮುತ್ತಲೂ
ಅಲೆದಾಟ
ಮಾಡುತ್ತಿದೆ. ಕೆಲವೊಮ್ಮೆ ಭಯ ಹುಟ್ಟಿಸುವ ರೀತಿಯಲ್ಲಿಯೂ ವರ್ತಿಸುತ್ತಿವೆ.
ಕೃಷಿಕರು ಈ ಸಮಸ್ಯೆಯನ್ನು ತಡೆಗಟ್ಟಲು ಬಾಂಬ್ ಹಾಕುವುದು, ಪಟಾಕಿ ಸಿಡಿಸುವುದು, ಬಲವಾದ ಜಾಲ ಅಳವಡಿಸಿ ಸದ್ದು ಮಾಡುವುದು ಮುಂತಾದ ಕ್ರಮಗಳನ್ನು ಕೈಗೊಂಡರೂ, ಮಂಗಗಳು ಮಾತ್ರ ಇವುಗಳಿಗೆ ಕಿಂಚಿತ್ತೂ ಹೆದರದೇ ಮತ್ತೆ ತೋಟಗಳಲ್ಲಿ ಬೀಡುಬಿಟ್ಟಿವೆ.
ಈ ನಡುವೆ ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಕಡಬ ಕೋಡಿಂಬಾಳ ಗ್ರಾಮಗಳ ಹಲವಾರು ಕೃಷಿಕರ ಕೋವಿಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಇದೂ ಮಂಗಗಳಿಗೆ ವರವಾಗಿದೆ. ಗ್ರಾಮಸ್ಥರು ಈಗಾಗಲೇ ಅರಣ್ಯ ಇಲಾಖೆ ಹಾಗೂ ಪಂಚಾಯಿತಿಗೆ ಮನವಿ ಸಲ್ಲಿಸಿ, ಮಂಗಗಳನ್ನು ಹಿಡಿದು ಕಾಡುಗಳಲ್ಲಿ ಇವುಗಳ ವಾಸಸ್ಥಾನಗಳಿಗೆ ಹಿಂತಿರುಗಿಸುವ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಕೃಷಿ ನಷ್ಟದಿಂದ ಬೆಳೆಗಾರರ ಆದಾಯ ಸಂಪೂರ್ಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ತಕ್ಷಣವೇ ಇದಕ್ಕೆ ಪರಿಹಾರ ನೀಡುವುದರ ಜೊತೆಗೆ, ಮಂಗಗಳ ಶಾಶ್ವತ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.