



ಕಡಬ ಟೈಮ್ಸ್ (KADABA TIMES): ಕುಮಾರಾಧಾರಾ ನದಿಗೆ ಕಡಬ ಸಮೀಪದ ಪಿಜಕಳದ ಪಾಲೋಲಿ ಎಂಬಲ್ಲಿ ನಿರ್ಮಾಣಗೊಂಡ ಸರ್ವಋತು ಸೇತುವೆನ್ನು ಇತ್ತೀಚೆಗೆ ಸುಳ್ಯ ಕ್ಷೇತ್ರದ ಶಾಸಕಿ ತರಾತುರಯಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಿದರು. ಈ ಸೇತುವೆ ಮೂಲಕ ಇದೀಗ ವಾಹನ ಸಂಚಾರ ಮುಕ್ತವಾಗಿ ನಡೆಯುತ್ತಿದ್ದು, ಬಹಳಷ್ಟು ವಾಹನಗಳು ಈ ಮಾರ್ಗವನ್ನು ಬಳಸುತ್ತಿದ್ದರೂ ಕೆಲ ಸಮಸ್ಯೆಗಳು ಇನ್ನೂ ಬಗೆಹರಿಯದೆ ಉಳಿದಿವೆ.
![]() |
ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ(KADABA TIMES) |
ಸೇತುವೆ
ಸಂಪರ್ಕಿಸುವ ಪಿಜಕಳ ಭಾಗದಲ್ಲಿ ರಸ್ತೆ ಕಿರಿದಾಗಿದ್ದು, ಇದು ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ
ತೊಂದರೆ ಉಂಟುಮಾಡುತ್ತಿದೆ. ಕೆಲ ದಿನಗಳ ಹಿಂದೆ ರಸ್ತೆ ಅಗಲೀಕರಣ ಹಾಗೂ ಮಣ್ಣು ತೆಗೆಯುವ ಕೆಲಸ ಆರಂಭವಾದರೂ,
ಕಾಮಗಾರಿ ಅರ್ಧಕ್ಕೆ ನಿಂತು ಉಳಿದಿದೆ ಎಂಬುದು ಸ್ಥಳೀಯರ ಅಳಲು.
"ಅರ್ಧಭಾಗದಲ್ಲಿ ರಸ್ತೆ ವಿಸ್ತರಣೆ ಮಾಡಿ ಉಳಿದ ಭಾಗ ಬಿಟ್ಟರೆ ಇದನ್ನು ಅಭಿವೃದ್ಧಿ ಎಂದು ಹೇಗೆ ಹೇಳಬಹುದು?" ಎಂದು ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಹಾಗೂ ಶಾಸಕರು ಕೂಡಲೇ ಕ್ರಮಕೈಗೊಂಡು ರಸ್ತೆ ಪೂರ್ಣಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಸ್ಥಳೀಯರ ಅಸಮಾಧಾನ ಏನು? : “ಇದೇ ರಸ್ತೆಯಲ್ಲಿ ಶಾಸಕರು ಸಹಿತ ಜನಪ್ರತಿನಿಧಿಗಳು ದೈನಂದಿನ ಸಂಚಾರ ಮಾಡುತ್ತಿರುವರೂ ಸಮಸ್ಯೆ ಕಡೆಗಣನೆಗೆ ಒಳಪಡುತ್ತಿದೆ” ಎಂಬ ಸಾರ್ವಜನಿಕರ ಆಕ್ರೋಶ ಕೇಳಿಬರುತ್ತಿದೆ. ಮಳೆಗಾಲದ ನೆಪ ಹೇಳದೆ ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿ ಸುರಕ್ಷಿತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಈ ಬಗ್ಗೆ ಕಡಬ ಟೈಮ್ಸ್ ಜೊತೆ ಮಾತನಾಡಿರುವ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಪ್ರಮೋದ್‌ಕುಮಾರ್ ಕೆ.ಕೆ. ಅವರು ಮಳೆಗಾಲದ ಕಾರಣದಿಂದ ಕಾಮಗಾರಿಯಲ್ಲಿ ವ್ಯತ್ಯಯ ಉಂಟಾಗಿದೆ. ಮರಳು ಸಮಸ್ಯೆಯೂ ಇದ್ದು ಈಗಾಗಲೇ ಸಮತಟ್ಟು ಮಾಡುವ ಕಾರ್ಯ ಮಾಡಲಾಗಿದೆ. ಕಾಂಕ್ರೀಟ್ ಕೆಲಸವನ್ನು ಶ್ರೀಘ್ರದಲ್ಲಿ ಮಾಡಲಾಗುವುದು ಎಂದಿದ್ದಾರೆ.