




ಕಡಬ ಟೈಮ್ಸ್: ರೀಲ್ಸ್ ಮೂಲಕ ಖ್ಯಾತಿ ಗಳಿಸಿದ್ದ ಮುಂಬೈ ಮೂಲದ ಯುವತಿಯೊಬ್ಬಳು ರೀಲ್ಸ್ ಮಾಡುವ ವೇಳೆ ಜಲಪಾತದ ಕಮರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ
ರಾಯಗಢ ಜಿಲ್ಲೆಯಲ್ಲಿಈ ಘಟನೆ ನಡೆದಿದ್ದು ಚಾರ್ಟರ್ಡ್
ಅಕೌಂಟೆಂಟ್ ಅನ್ವಿ ಕಾಮ್ದಾರ್( 27 ವ) ಬುಧವಾರ(ಜು.17) ಮೃತಪಟ್ಟ ಯುವತಿ.
ತಮ್ಮ ಏಳು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಮಂಗಳವಾರ ಪಕ್ಕದ ರಾಯಗಡ ಜಿಲ್ಲೆಯ ಮಂಗಾಂವ್ನ ಪ್ರಸಿದ್ಧ ಕುಂಭೆ ಜಲಪಾತಕ್ಕೆ ತೆರಳಿದ್ದರು. ಜಲಪಾತದ ಬಳಿ ವಿಡಿಯೋ ಮಾಡುತ್ತಿದ್ದ ವೇಳೆ 300 ಅಡಿ ಆಳದ ಕಮರಿಗೆ ಬಿದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಾಂವ್ ಪೊಲೀಸ್ ಠಾಣೆಯ ಅಧಿಕಾರಿ ಪ್ರಕಾರ, ಮುಂಬೈನ ಮುಲುಂಡ್ ಪ್ರದೇಶದ ನಿವಾಸಿ ಕಾಮ್ದಾರ್ ಮಳೆಯ ನಡುವೆ ತಮ್ಮ ಸ್ನೇಹಿತರೊಂದಿಗೆ ಸುಂದರವಾದ ಜಲಪಾತಕ್ಕೆ ಬಂದಿದ್ದರು ಮತ್ತು ಸುತ್ತಮುತ್ತಲಿನ ರಮಣೀಯ ದೃಶ್ಯಗಳನ್ನು ವಿಡಿಯೋ ಮಾಡುತ್ತಿದ್ದಾಗ ಕಾಲು ಜಾರಿ ಕಮರಿಗೆ ಬಿದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.
ಅನ್ವಿ ಕಮರಿಗೆ ಬಿದ್ದ ಬಗ್ಗೆ ಆಕೆಯ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಆರು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಅನ್ವಿಯನ್ನು ಕಮರಿಯಿಂದ ಹೊರತೆಗೆಯಲಾಯಿತು.
ಗಂಭೀರವಾಗಿ
ಗಾಯಗೊಂಡಿದ್ದ ಅನ್ವಿ ಅವರನ್ನು ಹತ್ತಿರದ ಮಂಗಾವ್ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.