




ಮಂಗಳೂರು/ಕದ್ರಿ: ಪ್ರಸಿದ್ದ ಪುಣ್ಯ ಕ್ಷೇತ್ರ ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಯುವಕನೊಬ್ಬನ ಹುಚ್ಚಾಟಕ್ಕೆ ಇಡೀ ಭಕ್ತ ಸಮೂಹವೇ ದಂಗಾಗಿ ಹೋದ ಪ್ರಸಂಗ ಮಂಗಳವಾರ ಮುಂಜಾನೆ ನಡೆದಿದೆ.
ಬೈಕ್
ಚಲಾಯಿಸಿಕೊಂಡು ನೇರ ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ ಯುವಕ ದೇವಸ್ಥಾನದ
ಒಳಗೆ ಪ್ರವೇಶ ಮಾಡಿದ್ದಾನೆ. ಬಳಿಕ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ
ಹೋಗಿ ಕಾಲಿನಿಂದ ಬಾಗಿಲು ಒದ್ದು ಅಪಚಾರ ಮಾಡಿದ್ದಾನೆ. ಅಷ್ಟೇ ಅಲ್ಲದೆ ಅರ್ಚಕರ ಮೇಲೂ ಹಲ್ಲೆ ನಡೆಸಿ ದೈವದ ಕತ್ತಿಯನ್ನು ಕೈಗೆತ್ತಿಕೊಂಡು ಹುಚ್ಚಾಟ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ನಂತರ ದೇವಸ್ಥಾನದ ಮುಂಭಾಗದ ಮಂಟಪದ ಮೇಲೇರಿ ಮಂಟಪದ ಛಾವಣಿಗೂ ಹಾನಿ ಮಾಡಿದ್ದು, ಈತನ ಹುಚ್ಚಾಟದಿಂದ ಅಲ್ಲಿ ಸೇರಿದ್ದ ಅರ್ಚಕರು ಹಾಗೂ ಭಕ್ತರು ಗಾಭರಿಗೊಂಡಿದ್ದಾರೆ.
ದಾಂದಲೆ ನಡೆಸಿದ ಯುವಕನನ್ನು ಕೊನೆಗೂ ಸೇರಿದ ಜನರು ಹಗ್ಗದಿಂದ ಕಟ್ಟಿಹಾಕಿದ್ದಾರೆ. ಬಳಿಕ ಯುವಕನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಆ ಯುವಕನ ಮಾಹಿತಿ ಸದ್ಯ ಲಭ್ಯವಾಗಿಲ್ಲ,ಪೊಲೀಸರ ವಿಚಾರಣೆಯ ಬಳಿಕ ಸಮರ್ಪಕ ಮಾಹಿತಿ ಸಿಗಲಿದೆ.
ಯುವಕನ ರಂಪಾಟದ ಕಾರಣದಿಂದ ದೇವರಿಗೆ ಮುಂಜಾನೆ ನಡೆಯಬೇಕಾಗಿದ್ದ ಪೂಜೆ ನೆರವೇರಿಸಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.