




ಕಡಬ: ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿ, ಹಳೇ ಪಿಂಚಣಿ ಯೋಜನೆ ಮುಂದುವರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರಿ ನೌಕರರು ಕಡಬ ಮಿನಿ ವಿಧಾನಸೌಧದ ಮುಂಭಾಗ ಜುಲೈ11ರಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್ ನೆಲ್ಯಾಡಿ ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸೂಚನೆಯಂತೆ ಹೋರಾಟದ ಮೊದಲ ಹಂತವಾಗಿ ತಾಲೂಕು ಕೇಂದ್ರದಲ್ಲಿ ಮನವಿ
ಸಲ್ಲಿಸಿದ್ದೇವೆ.
7ನೇ ವೇತನ ಆಯೋಗ ವರದಿ ನೀಡಿ ಹಲವು ತಿಂಗಳುಗಳೇ ಕಳೆದರೂ ರಾಜ್ಯ ಸರಕಾರ ಇನ್ನೂ ಜಾರಿಗೊಳಿಸಿಲ್ಲ. ನೌಕರರಿಗೆ ಹಳೇ ಪಿಂಚಣಿ ಯೋಜನೆ ಮುಂದುವರಿಸುವುದು, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸೇರಿದಂತೆ ಯಾವುದೇ ಬೇಡಿಕೆಗಳಿಗೂ ರಾಜ್ಯ ಸರಕಾರ ಎರಡು ವರ್ಷಗಳಿಂದ ಸ್ಪಂದಿಸಿಲ್ಲ ಎಂದು ಆರೋಪಿಸಿ ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಶೀಲ್ದಾರ್ ಪ್ರಭಾಕರ್ ಖಜೂರೆ, ಉಪ ತಶೀಲ್ದಾರ್ ಕೆ. ಟಿ. ಸಂಘದ ಪದಾಧಿಕಾರಿಗಳು, ವಿವಿಧ ವೃಂದದ ಪದಾಧಿಕಾರಿಗಳು, ಕಡಬ ತಾಲೂಕು ವಿವಿಧ ಇಲಾಖೆ ನೌಕರರು ಉಪಸ್ಥಿತರಿದ್ದರು.