




ಕಡಬ ಟೈಮ್ಸ್(KADABA TIMES):ಉಪ್ಪಿನಂಗಡಿ/ಬೆಳ್ತಂಗಡಿ: ಸಮಾಜ ಪರಿವರ್ತನಾ ಚಳವಳಿಯ ನಾಯಕ ಪಿ. ಡೀಕಯ್ಯ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ಕುಟುಂಬಸ್ಥರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರಿಂದ ಜು.18ರಂದು ಅವರ ಮೃತದೇಹವನ್ನು ದಫನ ಮಾಡಲಾಗಿದ್ದ ಕಣಿಯೂರು ಗ್ರಾಮದ ಪೊಯ್ಯ ಎಂಬಲ್ಲಿಂದ ಮೇಲಕ್ಕೆತ್ತಿ ತಹಶೀಲ್ದಾರ್ ಸುಪರ್ದಿಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಪಿ. ಡೀಕಯ್ಯರವರು10 ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ತನ್ನ ಮನೆಯಲ್ಲಿ ಕುಸಿದು ಬಿದ್ದಿದ್ದರು. ಅಂದಿನ ರಾತ್ರಿ ಅವರ ಪತ್ನಿ ಪದ್ಮುಂಜದ ಪೊಯ್ಯದಲ್ಲಿರುವ ಡೀಕಯ್ಯರ ಮೂಲ ಮನೆಯಲ್ಲಿದ್ದರು. ಗರ್ಡಾಡಿಯ ಮನೆಯಲ್ಲಿ ಡೀಕಯ್ಯ ಅವರು ಒಬ್ಬರೇ ಇದ್ದರು. ಬೆಳಗ್ಗೆ ಅವರ ಪತ್ನಿ ಗರ್ಡಾಡಿಯ ಮನೆಗೆ ಹೋದಾಗ ಅವರು ಕುಸಿದು ಬಿದ್ದು, ಪ್ರಜ್ಞಾ ಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು.
ತಕ್ಷಣ ಅವರನ್ನು ಅದೇ ಸ್ಥಿತಿಯಲ್ಲಿ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾದ ನಂತರ ವೆಂಟಿಲೆಂಟರ್ನಲ್ಲಿದ್ದ ಅವರು 24ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದರು. ಅವರ ಮೃತ ಶರೀರವನ್ನು ಕಣಿಯೂರು ಗ್ರಾಮದ ಪದ್ಮುಂಜ ಬಳಿಯ ಪೊಯ್ಯದ ಮೂಲ ಮನೆಗೆ ತಂದು ದಫನ ಮಾಡಲಾಗಿತ್ತು.

ಸಾವಿನ ಬಗ್ಗೆ ಸಂಶಯ : ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೃತರ ತಾಯಿಯ ಕುಟುಂಬಸ್ಥರ ಪರವಾಗಿ ಡೀಕಯ್ಯ ಅವರ ಸಹೋದರಿಯ ಗಂಡ ಪದ್ಮನಾಭ ಎಂಬವರು ಜು.೧೫ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಡೀಕಯ್ಯರ ಅಕಾಲಿಕ ಅಸಹಜ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೇಳಿಕೊಂಡಿದ್ದರು. ದೂರು ಸ್ವೀಕರಿಸಿದ ಬೆಳ್ತಂಗಡಿ ಪೊಲೀಸರು ಅದರ ಮುಂದಿನ ಪ್ರಕ್ರಿಯೆಗಾಗಿ ಪುತ್ತೂರು ಉಪವಿಭಾಗಾಧಿಕಾರಿಯವರಿಗೆ ಹಸ್ತಾಂತರಿಸಿದ್ದರು.
ಪುತ್ತೂರು ಉಪವಿಭಾಗಾಧಿಕಾರಿಯವರ ಆದೇಶದಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನ್ವಿಕಂ ನೇತೃತದಲ್ಲಿ ಜು.೧೮ರಂದು ದಫನ ಮಾಡಿದ ಮೃತದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು.ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪೋರೋನಿಕ್ಸ್ ತಜ್ಞರಾದ ಡಾ. ರಶ್ಮಿ ಹಾಗೂ ಸಿಬ್ಬಂದಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಶ್ಮಿ ಅವರ ನೇತೃತ್ವದಲ್ಲಿ ಸ್ಥಳದಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಿತು. ಈ ಸಂದರ್ಭ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ನಂದಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು.