




ಕಡಬ ಟೈಮ್ಸ್(KADABA TIMES):ನೆಲ್ಯಾಡಿ: ಗ್ರಾ.ಪಂ ಲೆಕ್ಕ ಪತ್ರಗಳ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ, ಶಿಷ್ಟಾಚಾರ ಪಾಲಿಸದಿರುವುದು ಮತ್ತು ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಕಡಬ ತಾಲೂಕು ಶಿರಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ವೆಂಕಟೇಶ್‌ರವರನ್ನು ಅಮಾನತುಗೊಳಿಸಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್‌ರವರು ಜೂ.7ರಂದು ನೀಡಿರುವ ಆದೇಶಕ್ಕೆ ತಡೆ ನೀಡಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ(ಕೆ.ಎ.ಟಿ) ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿರಾಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯಾಗಿ ಮುಂದುವರಿಯಲು ವೆಂಕಟೇಶ್‌ರವರಿಗೆ ದ.ಕ.ಜಿಲ್ಲಾ ಪಂಚಾಯತ್ ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಡಾ.ಕುಮಾರ್‌ರವರು ಅನುಮತಿಸಿ ಜು.16ರಂದು ಆದೇಶ ನೀಡಿದ್ದಾರೆ.

ಪಿಡಿಒ ವೆಂಕಟೇಶ್‌ರವರು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳದೇ ಏಕಪಕ್ಷೀಯವಾಗಿ ಗುತ್ತಿಗೆದಾರರನ್ನು ನೇಮಕಾತಿ ಮಾಡಿಕೊಂಡಿರುವುದು, ಏಲಂ ಮಾಡುವ ಪ್ರಕ್ರಿಯೆಯನ್ನು ನಿಯಮಾನುಸಾರ ನಡೆಸದಿರುವುದು, ಫಲಾನುಭವಿಗಳಿಗೆ ಚೆಕ್ ಮೂಲಕ ಸಹಾಯಧನ ಪಾವತಿಸದಿರುವುದು, ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದಿರುವುದು, ಖರೀದಿ ಪ್ರಕ್ರಿಯೆಯಲ್ಲಿ ಕೆ.ಟಿ.ಪಿ.ಪಿ. ನಿಯಮಗಳನ್ನು ಉಲ್ಲಂಘಿಸಿರುವುದು, ಶಿಷ್ಟಾಚಾರ ಉಲ್ಲಂಘಿಸಿರುವುದು, ನಿಯಮಾನುಸಾರ ಇ-ಟೆಂಡರ್ ಮೂಲಕ ನಡೆಸಬೇಕಾಗಿದ್ದ ಕಾಮಗಾರಿಯನ್ನು ಇ-ಟೆಂಡರ್ ಮೂಲಕ ನಡೆಸದಿರುವುದು, ಕುಡಿಯುವ ನೀರಿನ ಸ್ಥಾವರಕ್ಕೆ ಪಂಪ್ ಅಳವಡಿಸುವ ಸಂಬಂಧ ಮೀಟರ್ ಡೆಪಾಸಿಟ್‌ನ್ನು ವಿದ್ಯುತ್ ಇಲಾಖೆಗೆ ಪಾವತಿಸುವ ಬದಲು ಎಲೆಕ್ಟ್ರಿಕ್ ಅಂಗಡಿಯವರಿಗೆ ಪಾವತಿಸಿರುವುದು ಇನ್ನಿತ್ಯಾದಿ ಕರ್ತವ್ಯ ಲೋಪವೆಸಗಿದ್ದ ಹಿನ್ನೆಲೆಯಲ್ಲಿ ಜೂ.೭ರಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್‌ರವರು ಅಮಾನತುಗೊಳಿಸಿ ಆದೇಶಿಸಿದ್ದರು.
ಈ ಆದೇಶದ ವಿರುದ್ಧ ಪಿಡಿಒ ವೆಂಕಟೇಶ್‌ರವರು ಕೆ.ಎ.ಟಿ. ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಕೆ.ಎ.ಟಿ.ಯು ಮುಂದಿನ ಆದೇಶದ ತನಕ ವೆಂಕಟೇಶ್‌ರವರ ಅಮಾನತು ಆದೇಶ ರದ್ದುಗೊಳಿಸಿ ಜು.೪ರಂದು ಮಧ್ಯಂತರ ಆದೇಶ ನೀಡಿದೆ. ಕೆ.ಎ.ಟಿ.ಯ ಮಧ್ಯಂತರ ಆದೇಶದಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿರಾಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಹಾಜರಾಗಲು ವೆಂಕಟೇಶ್‌ರವರಿಗೆ ಅನುಮತಿದ್ದು ಈ ಅನುಮತಿ ಆದೇಶವು ಕೆ.ಎ.ಟಿ.ಯ ಅಂತಿಮ ಆದೇಶಕ್ಕೆ ಹಾಗೂ ಮಧ್ಯಂತರ ಆದೇಶದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಡಾ.ಕುಮಾರ್ ಜು.೧೬ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.