




ಕಡಬ ಟೈಮ್ಸ್(KADABA TIMES):ಸುಳ್ಯ : ಸುಳ್ಯದ ಬಂಗಾರ ಎಸ್.ಅಂಗಾರ ಅವರ ಕ್ಷೇತ್ರಕ್ಕೆ ರಾಜ್ಯದ ಮುಖ್ಯ ಮಂತ್ರಿ ಆಗಮಿಸಿದ್ದು ಜನರ ಸಮಸ್ಯೆ ಆಲಿಸದೆ ತೆರಳಿದ್ದು ಕ್ಷೇತ್ರದ ಜನತೆ ಬೇಸರಗೊಂಡು ನಿರ್ಗಮಿಸಿದ ಘಟನೆ ಸೋಮವಾರ ನಡೆದಿದೆ.
ಮಳೆಹಾನಿ ವೀಕ್ಷಣೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿರುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸುಳ್ಯ ತಾಲೂಕಿನ ಗಡಿಯಲ್ಲಿ ಸ್ವಾಗತಿಸಲಾಗಿತ್ತು.ಸಿ.ಎಂ ಸುಳ್ಯದ ನಿರೀಕ್ಷಣ ಮಂದಿರಕ್ಕೆ ಭೇಟಿ ನೀಡಿದರು. ಮುಖ್ಯಮಂತ್ರಿಗಳು ತುರ್ತಾಗಿ ನಿರ್ಗಮಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಯಿತು. ಈ ವೇಳೆ ಮುಖ್ಯಮಂತ್ರಿಗಳು ಅಧಿಕಾರಿಗಳು, ಸಚಿವರು, ಶಾಸಕರ ಜತೆ ಜಿಲ್ಲೆಯ ಹಾಗೂ ತಾಲೂಕಿನಲ್ಲಿ ಮಳೆಹಾನಿಯಿಂದ ಉಂಟಾದ ಹಾನಿಗಳ ಬಗ್ಗೆ ಮಾಹಿತಿ ಪಡೆದರು. ಸಚಿವ ಸುಳ್ಯ ಶಾಸಕ ಎಸ್.ಅಂಗಾರ ಅವರು ಭೂಕಂಪನ ಹಾಗೂ ಮಳೆಹಾನಿ ಬಗ್ಗೆ ವಿವರಿಸಿದರು
ಈ ಸುದ್ದಿಯನ್ನೂ ಓದಿರಿ:ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ:ಕಡಬದ ವೆಂಕಟರಮಣ ಮಂಕುಡೆ ಗೆ ಉಜಿರೆಯಲ್ಲಿ ಸನ್ಮಾನ

ಸಿಎಂ ಸುಳ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನಿರೀಕ್ಷಣ ಮಂದಿರದ ಬಳಿ ಸೇರಿದ್ದರು. ತಮ್ಮ ಮನವಿ, ಬೇಡಿಕೆ ಪತ್ರಗಳನ್ನು ನೀಡಲು ಸಿದ್ಧರಾಗಿದ್ದರು. ಆದರೆ ಸಿಎಂ 4.30ರ ವೇಳೆಗೆ ಐಬಿಗೆ ಆಗಮಿಸಿ ಕೇವಲ 15 ನಿಮಿಷದಲ್ಲಿ ಸುಳ್ಯದಿಂದ ತೆರಳಿದರು. ಜನರ ಸಮಸ್ಯೆ ಆಲಿಸುವ ಹಾಗೂ ಪರಿಹಾರ ಘೋಷಿಸುವ ನಿರೀಕ್ಷೆಯಲ್ಲಿದ್ದ ಜನರು ಅವಕಾಶ ಸಿಗದ ಬಗ್ಗೆ ಬೇಸರಗೊಂಡು ಸ್ಥಳದಿಂದ ಕಾಲ್ಕಿತ್ತರು.ಭೇಟಿ ವೇಳೆ ಪೇಟೆಯಲ್ಲಿ ಝೀರೋ ಟ್ರಾಫಿಕ್ ಏರ್ಪಡಿಸಲಾಗಿತ್ತು. ಮುಖ್ಯಮಂತ್ರಿಗಳ ಹೇಳಿಕೆ ಪಡೆಯಲು ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳು ನಿರಾಶೆ ಪಡುವಂತಾಯಿತು.
ಈ ಬಗ್ಗೆ ಸುಳ್ಯ ನಗರ ಪಂಚಾಯತ್ ವಿಪಕ್ಷ ಸದಸ್ಯ ವೆಂಕಪ್ಪ ಗೌಡ ಮಾತನಾಡಿ, ಮುಖ್ಯಮಂತ್ರಿಗಳ ಭೇಟಿ ಬಗ್ಗೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ಜನರ ಸಮಸ್ಯೆ ಆಲಿಸಲು ಮುಖ್ಯಮಂತ್ರಿಗಳಿಗೆ ಸಮಯದ ಕೊರತೆ ಇದ್ದರೆ ವೈಮಾನಿಕ ಸಮೀಕ್ಷೆ ಮಾಡಬಹುದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.