




ಕಡಬ ಟೈಮ್ಸ್(KADABA TIMES):ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಕಠಿಣ ಕ್ರಮಕ್ಕೆ ಹಾಗೂ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಗೃಹಸಚಿವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ.
ಜಯಮಹಲ್ನಲ್ಲಿರುವ ಗೃಹ ಸಚಿವರ ಸರ್ಕಾರಿ ನಿವಾಸದ ಎದುರು ಭಾರೀ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರ ಪ್ರತಿಭಟನೆಯ ಕಿಚ್ಚಿಗೆ ಹೈರಾಣಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದು, ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಬಜರಂಗದಳ ಹರ್ಷ ಕೊಲೆ ಹಾಗೂ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿರುವುದು ಬಿಜೆಪಿ ಆಡಳಿತಾವಧಿಯಲ್ಲೇ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬ ಆಕ್ರೋಶ ಕಾರ್ಯಕರ್ತರಲ್ಲಿ ವ್ಯಕ್ತವಾಗುತ್ತಿದೆ. ಸದ್ಯ ಪ್ರವೀಣ್ ಹತ್ಯೆ ಬಳಿಕೆ ರಾಜ್ಯ ಬಿಜೆಪಿ ಸರ್ಕಾರ ತಮ್ಮದೇ ಕಾರ್ಯಕರ್ತರ ನಿರಂತರ ಪ್ರತಿಭಟನೆಗಳನ್ನು ಎದುರಿಸುತ್ತಿದ್ದು, ಇದೀಗ ಎಬಿವಿಪಿ ಕಾರ್ಯಕರ್ತರು ಗೃಹಸಚಿವ ಅರಗ ಜ್ಞಾನೇಂದ್ರ ಅವರ ಸರ್ಕಾರಿ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಮನೆಯೊಳಗೆ ನುಗ್ಗಲು ಕಾರ್ಯಕರ್ತರ ಯತ್ನ: ಎಬಿವಿಪಿ ಕಾರ್ಯಕರ್ತರು ಗೃಹಸಚಿವರ ಸರ್ಕಾರಿನಿವಾಸದ ಗೇಟ್ ತಳ್ಳಿ ಮನೆ ಬಾಗಿಲು ತೆರೆದು ಒಳನುಗ್ಗಲು ಯತ್ನಿಸಿದ್ದಾರೆ. ಸ್ಥಳದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪೊಲೀಸರು ಇದ್ದ ಹಿನ್ನೆಲೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸಪಟ್ಟಿದ್ದಾರೆ.

ಗೃಹ ಸಚಿವರ ಸರ್ಕಾರಿ ನಿವಾಸದ ಬಾಗಿಲಿನ ಮುಂದೆ ಪ್ರತಿಭಟನೆ ಕುಳಿತ ಕಾರ್ಯಕರ್ತರು, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದು, ನಿವಾಸದ ಒಳಗೆ ಕಾರ್ಯಕರ್ತರು ನುಗ್ಗದಂತೆ ಪೊಲೀಸರು ಬಾಗಿಲಿಗೆ ಅಡ್ಡಲಾಗಿ ನಿಂತಿದಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತರ ದೌಡು:
ಗೃಹ ಸಚಿವರ ಸರ್ಕಾರಿ ಮನೆ ಬಳಿ ಎಬಿವಿಪಿ ಪ್ರತಿಭಟನೆ ಹಿನ್ನೆಲೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತರ ಭೇಟಿ ನೀಡಿದ್ದು, ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಭಟನೆ ನಡೆದ ಸ್ಥಳ ಪರಿಶೀಲಿಸಿದ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗಳನ್ನು ಗೃಹ ಸಚಿವರ ನಿವಾಸದ ಒಳಗೆ ಕರೆಸಿಕೊಂಡು ಸಂದೀಪ್ ಪಾಟೀಲ್ ಅವರು ತರಾಟೆಗೆ ತೆಗೆದುಕೊಂಡರು.