




ಕಡಬ ಟೈಮ್ಸ್(KADABA TIMES): ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರದ ಅಂತಿಮ ಯಾತ್ರೆಯ ಸಂದರ್ಭ ಆಕ್ರೋಶಿತ ಕಾರ್ಯಕರ್ತರು ಸ್ಥಳೀಯ ಸಂಸದ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರನ್ನು ಅಲುಗಾಡಿಸಿ ಉರುಳಿಸಲು ಯತ್ನಿಸಿದ್ದು ಭಾರೀ ಸುದ್ದಿಯಾಗಿತ್ತು.
ಈ ನಡುವೆ ಮರುದಿನ ಮುಖ್ಯಮಂತ್ರಿ ಭೇಟಿ ಸಂದರ್ಭ ಅವರ ಜತೆಗೆ ಬಂದಿದ್ದ ನಳಿನ್ ಕುಮಾರ್ ಕಟೀಲ್ ಮತ್ತೆ ಸ್ಥಳೀಯ ಕಾರ್ಯಕರ್ತರಿಂದ ಆಕ್ರೋಶ ಎದುರಿಸಿದ ಘಟನೆ ಜರಗಿದ್ದು ಆ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ.
“ಇವರು ಇಲ್ಲಿಯವರೆಗೆ ಏನು ಮಾಡಿದ್ದಾರೆ ಅನ್ನೋದನ್ನ ಹೇಳಲಿ. ಕಾರ್ಯಕರ್ತರು ಇರೋದರಿಂದಲೇ ಇವರೆಲ್ಲ ಮೇಲೆ ಬಂದು ನಾಯಕರು ಆಗಿರೋದು. ಎಲ್ಲಿಗೆ ಓಡುತ್ತಿದ್ದೀಯಾ ಓ ನಳಿನ್” ಎಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಏಕ ವಚನದಲ್ಲಿ ಆವಾಜ್ ಹಾಕುತ್ತಿರುವ ವಿಡಿಯೋ ಎಲ್ಲರ ಸ್ಟೇಟಸ್ ಹಾಗು ವಾಟ್ಸಪ್ಪ್ ಗುಂಪುಗಳಲ್ಲಿ ಹರಿದಾಡುತ್ತಿದೆ.

ಜನರ ಏರು ದನಿಯ ಬೊಬ್ಬೆಗೆ ನಳಿನ್ ಕುಮಾರ್ ಬಿರುಬಿರನೇ ಎಸ್ಕೆಪ್ ಆಗುತ್ತಿರುವ ದೃಶ್ಯ ಕೂಡ ವೀಡಿಯೋದಲ್ಲಿದೆ. ಸಂಸದರ ತವರು ತಾಲೂಕಿನಲ್ಲೇ ಈ ರೀತಿಯ ಘಟನೆ ಜರಗಿದ್ದು ಸ್ವತಃ ನಳಿನ್ ಕುಮಾರ್ ಗೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಪೊಲೀಸರು ಮಧ್ಯ ಪ್ರವೇಶದಿಂದ ಪರಿಸ್ಥಿತಿ ಕೊಂಚ ತಣ್ಣಗಾಗಿತ್ತು
ಮುಖ್ಯಮಂತ್ರಿಗಳು ಇದ್ದರೂ ಕೂಡ ಜನರು ಆವೇಶಭರಿತರಾಗಿದ್ದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಸಚಿವರಾದ ಆರಗ ಜ್ಞಾನೇಂದ್ರ, ಶ್ರೀನಿವಾಸ್ ಪೂಜಾರಿ, ಜಿಲ್ಲೆಯ ಶಾಸಕರುಗಳಾದ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್ ಸೇರಿದಂತೆ ಮುಖ್ಯಮಂತ್ರಿಗಳ ಜತೆಯಲ್ಲಿದ್ದ ಬಿಜೆಪಿ ನಾಯಕರು ಈ ಸಂದರ್ಭ ಪೆಚ್ಚು ಮೊರೆ ಹಾಕಿ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು. ವೈರಲ್ ಆಗಿರುವ ವೀಡಿಯೊ ಇಲ್ಲಿದೆ ನೋಡಿ: