




ಕಡಬ ಟೈಮ್ಸ್(KADABA TIMES):ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ಮೈದುಂಬಿ ಹರಿಯುತ್ತಿದೆ. ಇದರಿಂದ ನದಿಗಳ ಉಗಮ ಪ್ರದೇಶದಲ್ಲಿ ನೆರೆ ಭೀತಿ ಆವರಿಸಿದೆ.
ಉಪ್ಪಿನಂಗಡಿಯಲ್ಲಿ ಸೋಮವಾರ ಬೆಳಗ್ಗೆ 37.4 ಮಿ.ಮೀ. ಮಳೆ ದಾಖಲಾಗಿದ್ದು, ಕುಮಾರಧಾರ ನದಿಯ ಉಗಮವಾಗುವ ಪ್ರದೇಶವಾದ ಕಡಬ ತಾಲೂಕಿನ ಕುಮಾರಪರ್ವತ, ಸುಬ್ರಹ್ಮಣ್ಯ ಭಾಗಗಳಲ್ಲಿ ಹಾಗೂ ನೇತ್ರಾವತಿ ನದಿಯು ಉಗಮವಾಗುವ ಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಉಭಯ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ.
ನದಿ ತಟದಲ್ಲಿರುವ ಕೃಷಿ ಪ್ರದೇಶಗಳಿಗೆ ಈಗಾಗಲೇ ನೀರು ನುಗ್ಗಿದ್ದು, ಇಲ್ಲಿನ ಎರಡು ನದಿಗಳ ಸಂಗಮ ಸ್ಥಳವಾದ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ನೇತ್ರಾವತಿಗೆ ಇಳಿಯಲು ಇರುವ 38 ಮೆಟ್ಟಿಲುಗಳಲ್ಲಿ 25 ಮೆಟ್ಟಿಲುಗಳು ಈಗಾಗಲೇ ಮುಳುಗಿವೆ. ದೇವಾಲಯದ ಬಳಿ ನದಿಯಲ್ಲಿ ಶಂಭೂರು ಅಣೆಕಟ್ಟಿನವರು ಅಳವಡಿಸಿರುವ ಜಲ ಮಾಪಕದಲ್ಲಿ ನೇತ್ರಾವತಿ ನದಿಯಲ್ಲಿ 28 ಮೀ. ನೀರಿದ್ದು, ಇದರಲ್ಲಿ ನೀರಿನ ಅಪಾಯದ ಮಟ್ಟ 30 ಮೀ. ಆಗಿದೆ.

ಉಪ್ಪಿನಂಗಡಿಯಲ್ಲಿ ನೆರೆ ಬಂದಾಗ ದೇವಾಲಯದ ವಠಾರ, ರಥಬೀದಿ, ಪಂಜಳ, ಹಿರ್ತಡ್ಕ- ಮಠ, ಹಳೆಗೇಟು, ಕಡವಿನ ಬಾಗಿಲು, ಸೂರಪ್ಪ ಕೌಂಪೌಂಡ್, ಕೆಂಪಿಮಜಲು ಹೀಗೆ ನದಿ ಪಾತ್ರದ ಪರಿಸರ ಜಲಾವೃತಗೊಳ್ಳುತ್ತವೆ. ಪುತ್ತೂರು ತಹಶೀಲ್ದಾರ್ ನಿಸರ್ಗ ಪ್ರಿಯ ಅವರು ಸೋಮವಾರ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದು, ನೆರೆ ಬರುವ ಸಾಧ್ಯತೆ ಕಂಡಾಗ ಇಲ್ಲಿಂದ ಸ್ಥಳಾಂತರಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳಿಗೆ ಮನವಿ ಮಾಡಿದರು. ಬಳಿಕ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕೃತಿ ವಿಕೋಪ ತಂಡ: ಸನ್ನದ್ಧ: ಗೃಹ ರಕ್ಷದ ದಳದ ಪ್ರಕೃತಿ ವಿಕೋಪ ತಂಡ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿ ಬೀಡು ಬಿಟ್ಟಿದ್ದು, ನೆರೆ ಬಂದ ಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಿದೆ. ನೆರೆ ಸಂದರ್ಭ ರಕ್ಷಣಾ ಕಾರ್ಯಾಚರಣೆಗೆ ಗೃಹ ರಕ್ಷಕದಳದ ಪ್ರಾಕೃತಿಕ ವಿಕೋಪ ತಂಡದಲ್ಲಿ ಒಂದು ರಬ್ಬರ್ ಬೋಟ್ ಇದ್ದು, ದ.ಕ. ಜಿಲ್ಲಾಡಳಿತವು ಉಪ್ಪಿನಂಗಡಿಗೆಂದೇ ನೀಡಿದ ಫೈಬರ್ ಬೋಟ್ ತೀರಾ ನಾದುರಸ್ತಿಯಲ್ಲಿದ್ದು, ಬಳಸಲಾಗದ ಸ್ಥಿತಿಯಲ್ಲಿದೆ. ಕಳೆದ ವರ್ಷವೇ ಬೋಟ್ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದ್ದರೂ, ಇಲ್ಲಿಗೆ ಇನ್ನೊಂದು ಬೋಟನ್ನು ನೀಡುವಲ್ಲಿ ಜಿಲ್ಲಾಡಳಿತ ಮುಂದಾಗಿಲ್ಲ. ಆದ್ದರಿಂದ ಈ ಬಾರಿ ನೆರೆ ಬಂದರೆ ಒಂದೇ ಬೋಟ್ನಲ್ಲಿ ಪರಿಹಾರ ಕಾರ್ಯಾಚರಣೆಗೆ ಮುಂದಾಗಬೇಕಾದ ಸ್ಥಿತಿ ಇದೆ.