




ಕಡಬ ಟೈಮ್ಸ್(KADABA TIMES):ಕಡಬ: ತಾಂತ್ರಿಕ ಕಾರಣಗಳಿಂದ ಕಡಬ ತಾಲೂಕಿನ 7 ಸರಕಾರಿ ಪ್ರೌಢ ಶಾಲೆಗಳ ಶಿಕ್ಷಕರಿಗೆ ವೇತನ ಬಾರದೆ ತೊಂದರೆಗೆ ಒಳಗಾಗಿರುವುದನ್ನು ತಿಳಿದುಕೊಂಡ ಸರಕಾರ ಕೊನೆಗೂ ವೇತನ ಬಿಡುಗಡೆ ಮಾಡಿದೆ.
ತಾಂತ್ರಿಕ ತೊಂದರೆಯನ್ನು ನಿವಾರಣೆಗೊಳಿಸಿ ಕಡಬ ತಾಲೂಕಿಗೆ 166.01 ಲಕ್ಷ ಹಣ ಬಿಡುಗಡೆಗೊಳಿಸಿ ಆದೇಶ ನೀಡಲಾಗಿದೆ.

ಕಡಬ ಹೊಸ ತಾಲೂಕಿನ 9 ಸರಕಾರಿ ಪ್ರೌಢ ಶಾಲೆಗಳ ಪೈಕಿ 7 ಶಾಲೆಗಳ ಶಿಕ್ಷಕರಿಗೆ ಕಳೆದೆರಡು ತಿಂಗಳಿನಿಂದ ವೇತನ ಬಾರದೆ ಹೆಚ್ಚಿನ ಶಿಕ್ಷಕರು ಕಂಗಲಾಗಿದ್ದರು. ಈ ಹಿಂದೆ ಪುತ್ತೂರು ತಾಲೂಕಿನಲ್ಲಿದ್ದ ಕಡಬ ತಾಲೂಕಿನಲ್ಲಿರುವ ಸವಣೂರು, ಕಾಣಿಯೂರು, ದೊಳ್ಪಾಡಿ, ಕಡಬ, ಪಡುಬೆಟ್ಟು, ಕೊಣಾಲು, ಪಾಲ್ತಾಡಿ ಮಂಜುನಾಥನಗರ, ಈ ಹಿಂದೆ ಸುಳ್ಯ ತಾಲೂಕಿನಲ್ಲಿದ್ದ ಏನೆಕಲ್ಲು, ಎಡಮಂಗಲ ಸರಕಾರಿ ಪ್ರೌಢ ಶಾಲೆಗಳನ್ನು ಬೇರ್ಪಡಿಸಿ ನೂತನ ಕಡಬ ತಾಲೂಕಿಗೆ ಸೇರ್ಪಡೆಗೊಳಿಸಿ ವಿಂಗಡಣೆ ಮಾಡಲಾಗಿದೆ, ಆದರೆ ಹಣಕಾಸು ಇಲಾಖೆಯಿಂದ ಕಡಬ ತಾಲೂಕಿನ ಶಿಕ್ಷಕರ ವೇತನ ಪುತ್ತೂರು ಮತ್ತು ಸುಳ್ಯ ತಾಲೂಕಿಗೆ ಮೊದಲಿನಂತೆ ಹಣ ಬಿಡುಗಡೆಯಾಗಿದೆ, ಆದರೆ ಈ ಹಿಂದಿನಂತೆ ಪುತ್ತೂರು ತಾಲೂಕಿನಿಂದ ಕಡಬದ ೭ ಪ್ರೌಢ ಶಾಲೆಗಳ ಶಿಕ್ಷಕರಿಗೆ ವೇತನ ನೀಡಲು ಪುತ್ತೂರು ತಾಲೂಕಿನ ಲಿಸ್ಟ್‌ನಲ್ಲಿ ಕಡಬ ತಾಲೂಕಿನ 7 ಪ್ರೌಢ ಶಾಲೆಗಳು ಇಲ್ಲದೇ ಪ್ರತ್ಯೇಕವಾಗಿ ಕಡಬ ತಾಲೂಕಿನ ಪಟ್ಟಿಯಲ್ಲಿರುವುದು ವೇತನ ನೀಡದಿರಲು ಕಾರಣವಾಗಿತ್ತು. ಇದರಿಂದ ಕಡಬ ತಾಲೂಕಿನ ಸುಮಾರು 70ರಿಂದ 75 ಶಿಕ್ಷಕರು ವೇತನ ಇಲ್ಲದೆ ಪರದಾಡುವಂತಾಗಿತ್ತು.
ಇದೀಗ ಎಚ್ಚೆತ್ತುಕೊಂಡ ಹಣಕಾಸು ಇಲಾಖೆ ಈ ಹಿಂದೆ ಉಂಟಾಗಿರುವ ತಾಂತ್ರಿಕ ತೊಂದರೆಯನ್ನು ನಿವಾರಣೆಗೊಳಿಸಿ ವೇತನ ಪಾವತಿಸಲು ಹಣ ಬಿಡುಗಡೆಗೊಳಿಸಿ ಆದೇಶ ನೀಡಲಾಗಿದೆ.