




ಕಡಬ ಟೈಮ್ಸ್(KADABA TIMES):ನೆಲ್ಯಾಡಿ: ನೆಲ್ಯಾಡಿಯನ್ನು ಹೋಬಳಿ ಕೇಂದ್ರ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲು ನೆಲ್ಯಾಡಿ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ಜೂ.7ರಂದು ಅಧ್ಯಕ್ಷೆ ಚೇತನಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕಡಬ ತಾಲೂಕು ಕೇಂದ್ರ ಆಗಿರುವುದರಿಂದ ನೆಲ್ಯಾಡಿಯನ್ನು ಹೋಬಳಿ ಕೇಂದ್ರ ಮಾಡಬೇಕೆಂದು ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು.
ಈ ಬಗ್ಗೆ ಚರ್ಚೆ ನಡೆದು ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕಂದಾಯ ಸಚಿವರಿಗೆ, ಜಿಲ್ಲಾಧಿಕಾರಿಯವರಿಗೆ, ಸಹಾಯಕ ಆಯುಕ್ತರಿಗೆ ಹಾಗೂ ತಹಶೀಲ್ದಾರ್ ಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ಕಡಬ ತಾಲೂಕಿಗೆ ಆಹಾರ ನಿರೀಕ್ಷಕರ ನೇಮಕ ಮಾಡುವಂತೆಯೂ ಮನವಿಗೆ ನಿರ್ಣಯಿಸಲಾಯಿತು.
ಬೋರ್ವೆಲ್ ಜಲಮರುಪೂರಣಕ್ಕೆ ಅವಕಾಶಕ್ಕೆ ಮನವಿ: ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳಿಗೂ ಬೋರ್ವೆಲ್ ಜಲಮರುಪೂರಣಕ್ಕೆ ಅವಕಾಶ ಕೊಡಬೇಕೆಂದು ಮನವಿ ಮಾಡಲು ನಿರ್ಣಯಿಸಲಾಯಿತು.

ಸ್ಮಶಾನ ಅಭಿವೃದ್ಧಿಗೆ ಕ್ರಮ: ನೆಲ್ಯಾಡಿ ಸ್ಮಶಾನ ಅಭಿವೃದ್ಧಿಗೆ ಅನುದಾನ ಕೋರಿ ಸರಕಾರಕ್ಕೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಲೂ ಸಹಾಯಧನ ಕೋರಲು ನಿರ್ಣಯ ಕೈಗೊಳ್ಳಲಾಯಿತು.
ಕಾರ್ಯದರ್ಶಿ ನೇಮಕಗೊಳಿಸಿ: ನೆಲ್ಯಾಡಿ ಗ್ರಾ.ಪಂ ಕಾರ್ಯದರ್ಶಿ ಕಾಣಿಯೂರು ಗ್ರಾ.ಪಂ ನಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೆಲ್ಯಾಡಿ ಗ್ರಾ.ಪಂ.ನಲ್ಲಿ ಕಾರ್ಯದರ್ಶಿ ಇಲ್ಲದೇ ಇರುವುದರಿಂದ ಈಗ ಕೆಲಸದ ಒತ್ತಡ ಆಗಿದೆ. ಆದ್ದರಿಂದ ಖಾಯಂ ಕಾರ್ಯದರ್ಶಿ ಬೇಕು ಎಂದು ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ತಾ.ಪಂ.ಗೆ ಮನವಿ ಮಾಡಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರುಗಳಾದ ಜಯಾನಂದ ಬಂಟ್ರಿಯಾಲ್, ರವಿಪ್ರಸಾದ್ ಶೆಟ್ಟಿ, ಪ್ರಕಾಶ್ ಪೂಜಾರಿ, ಯಾಕುಬ್ ಯಾನೆ ಸಲಾಂ, ಜಯಲಕ್ಷ್ಮೀ ಪ್ರಸಾದ್, ಪುಷ್ಪಾ ಪಡುಬೆಟ್ಟು, ಜಯಂತಿ ಮಾದೇರಿ, ಉಷಾ ಜೋಯಿ, ರೇಷ್ಮಾಶಶಿ, ಮೊಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಪಿಡಿಒ ಮಂಜುಳ ಎನ್.,ಸ್ವಾಗತಿಸಿ, ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.