




ಕಡಬ ಟೈಮ್ಸ್(KADABA TIMES):ಕುಡಿತದ ಚಟಕ್ಕೆ ಬಿದ್ದು ನಿತ್ಯವೂ ಮದ್ಯಪಾನ ಸೇವಿಸುವ ಜನರನ್ನು ನಾವು ನಿತ್ಯವೂ ನೋಡುತ್ತೇವೆ.ಅಮಲಿನಲ್ಲಿ ವಿವಿಧ ಘಟನೆಗಳೂ ನಡೆಯುತ್ತಿರುವುದು ಸುದ್ದಿಯಾಗುತ್ತಲೇ ಇರುತ್ತದೆ.ಈ ನಡುವೆ ಇಲ್ಲೊಂದು ಪ್ರತಿನಿತ್ಯವೂ ಸಾರಾಯಿ ಕುಡಿಯುವ ಮೂಲಕ ಹುಂಜವೊಂದು ಸುದ್ದಿಯಾಗಿದೆ.
ಆಶ್ಚರ್ಯವೆಮದರೂ ನಂಬಲೇಬೇಕಾದ ಸತ್ಯ ಘಟನೆಯಾಗಿದ್ದು ಸಾರಾಯಿ ಕುಡಿದರಷ್ಟೇ ಆಹಾರ ನೀರು ಮುಟ್ಟುತ್ತದೆ. ಅಂದ ಹಾಗೆ ಈ ಹುಂಜ ಇರುವುದು ನಮ್ಮ ಕರಾವಳಿ ಭಾಗದಲ್ಲಿ ಅಲ್ಲ, ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ಪಿಪರಿ ಗ್ರಾಮದಲ್ಲಿ ಈ ಹುಂಜವಿದೆ.
ಈ ಗ್ರಾಮದಲ್ಲಿ ಭಾವು ಕಟೋರೆ ಎನ್ನುವವರು ಕುಕ್ಕುಟೋದ್ಯಮ ನಡೆಸುತ್ತಿದ್ದಾರೆ. ತಮ್ಮ ಫಾರ್ಮ್‌ನಲ್ಲಿ ಬೇರೆ ಬೇರೆ ಜಾತಿಯ ಹಲವು ಕೋಳಿಗಳನ್ನು ಸಾಕುತ್ತಿದ್ದಾರೆ. ಈ ಮಧ್ಯೆ ಹುಂಜವೊಂದು ಏಕಾಏಕಿ ಅನಾರೋಗ್ಯಕ್ಕೀಡಾಗಿ ಆಹಾರ ಸೇವಿಸುವುದನ್ನು ನಿಲ್ಲಿಸಿತು.
ಹಲವು ಕಡೆಯಿಂದ ಔಷಧಿ ಮಾಡಿದರೂ ಹುಂಜ ಗುಣವಾಗಿರಲಿಲ್ಲ. ಕೊನೆಗೆ ಸ್ಥಳೀಯ ವ್ಯಕ್ತಿಯೋರ್ವರ ಸಲಹೆ ಮೇರೆಗೆ ಸ್ವಲ್ಪ ಪ್ರಮಾಣದ ಮದ್ಯ ನೀಡಲು ಪ್ರಾರಂಭಿಸಿದರು. ಪ್ರತಿನಿತ್ಯ ಸ್ವಲ್ಪ ಸ್ವಲ್ಪ ಸಾರಾಯಿ ಕೊಡುತ್ತಿದ್ದಂತೆ ಹುಂಜದ ಆರೋಗ್ಯ್ ಸಹಜ ಸ್ಥಿತಿಗೆ ಬಂದಿತ್ತು.

ಹೀಗಾಗಿ ಕೋಳಿ ಸಾಕಿದಾತ ತನಗೆ ಕುಡಿತದ ಅಭ್ಯಾಸವಿಲ್ಲದಿದ್ದರೂ ಹುಂಜನಿಗೆ ಮದ್ಯದಂಗಡಿಯಿಂದ ಸಾರಾಯಿ ತಂದು ಕೊಡುತ್ತಿದ್ದರು. ಇದಾದ ಕೆಲವೇ ದಿನಗಳಲ್ಲಿ ಹುಂಜ ಸಂಪೂರ್ಣ ಚೇತರಿಸಿಕೊಂಡಿತು. ಆಗ ಹುಂಜ ತನ್ನ ಅಸಲಿ ಆಟ ಶುರುವಿಟ್ಟುಕೊಂಡಿತು.
ಹುಂಜ ಚೇತರಿಸಿಕೊಂಡ ಬಳಿಕ ಭಾವು ಕಟೋರೆ ಮದ್ಯ ನೀಡುತ್ತಿದ್ದುದನ್ನು ನಿಲ್ಲಿಸಿದರು.ಆದರೆ ಮದ್ಯದ ರುಚಿ ಅರಿತಿದ್ದ ಹುಂಜ ಮದ್ಯ ನೀಡದೇ ನೀರು, ಆಹಾರ ಮುಟ್ಟುತ್ತಿರಲಿಲ್ಲ.ಇದರಿಂದ ಮತ್ತೆ ಸಾರಾಯಿ ನೀಡುತ್ತಿದ್ದಂತೆ ನೀರು, ಆಹಾರ ತಿಂದು ಹಾಯಾಗಿ ರೆಕ್ಕೆ ಬಡಿದು ಕೂಗಿತು.
ಹುಂಜಗೆ ನಿತ್ಯವೂ ಸಾರಾಯಿ ಬೇಕೇ ಬೇಕು.ಹುಂಜನ ಸಾರಾಯಿಗಾಗಿಯೇ ಭಾವು ಕಟೋರೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದರು. ಕೊನೆಗೆ ಈ ವೆಚ್ಚ ಭರಿಸಲಾಗದೇ ಕಟೋರೆ ಪಶು ವೈದ್ಯರನ್ನು ಸಂಪರ್ಕಿಸಿದ್ದಾರೆ. ಸದ್ಯ ಪಶು ವೈದ್ಯರು ಮದ್ಯದ ವಾಸನೆಯ ವಿಟಮಿನ್ ಮಾತ್ರೆಗಳನ್ನು ನೀಡಲು ಪ್ರಾರಂಭಿಸಿ,ಹಂತ ಹಂತವಾಗಿ ಅದರ ಮದ್ಯದ ಚಟ ಬಿಡಿಸಲು ಮುಂದಾಗಿದ್ದಾರೆ. ಸದ್ಯ ಫಾರ್ಮ್‌ನಲ್ಲಿರುವ ಕುಡುಕ ಹುಂಜನನ್ನು ನೋಡಲು ಕುತೂಹಲದಿಂದ ಬರುತ್ತಿದ್ದಾರೆ.