DG&IGP ORDER: ಧರ್ಮಸ್ಥಳ ಪ್ರಕರಣ : ಇನ್ನೆರಡು ಪ್ರಕರಣಗಳು ಎಸ್‌ ಐಟಿಗೆ ವರ್ಗಾವಣೆ

DG&IGP ORDER: ಧರ್ಮಸ್ಥಳ ಪ್ರಕರಣ : ಇನ್ನೆರಡು ಪ್ರಕರಣಗಳು ಎಸ್‌ ಐಟಿಗೆ ವರ್ಗಾವಣೆ

Kadaba Times News

ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಧರ್ಮಸ್ಥಳದ ನಿಗೂಢ ಸಾವುಗಳ ಸರಣಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಠಾಣೆಯಲ್ಲಿ ದಾಖಲಾಗಿದ್ದ ಅಸಹಜ ಸಾವು ಪ್ರಕರಣ (ಯುಡಿಆರ್) ಹಾಗೂ ಪ್ರತ್ಯೇಕ ದೂರು ಅರ್ಜಿಯೊಂದರ ತನಿಖೆಯನ್ನು ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವರ್ಗಾಯಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು (ಡಿಜಿಪಿ ಮತ್ತು ಐಜಿಪಿ) ಮಹತ್ವದ ಆದೇಶ ಹೊರಡಿಸಿದ್ದಾರೆ.


ಪ್ರಕರಣದ ಸೂಕ್ಷ್ಮತೆ ಹಾಗೂ ಗಂಭೀರತೆಯನ್ನು ಪರಿಗಣಿಸಿ, ಕೂಲಂಕಷ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ಖಚಿತಪಡಿಸಿವೆ.


ಅನಾಮಿಕ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯ ಮೇರೆಗೆ ಎಸ್ಐಟಿ ತಂಡವು ಧರ್ಮಸ್ಥಳ ವ್ಯಾಪ್ತಿಯಲ್ಲಿ ಉತ್ಖನನ ನಡೆಸುತ್ತಿತ್ತು. ಜುಲೈ 31ರಂದು ‘6ನೇ ಪಾಯಿಂಟ್ ಎಂದು ಗುರುತಿಸಲಾದ ಸ್ಥಳದಲ್ಲಿ ಅಗೆದಾಗ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಕುರಿತು ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ್ ಅವರು ಆಗಸ್ಟ್ 1ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಅನ್ವಯ, ಅಸಹಜ ಸಾವು (ಯು.ಡಿ.ಆರ್. ಸಂಖ್ಯೆ 35/2025) ಪ್ರಕರಣವನ್ನು ಕಲಂ 174 (3) & (VI) ಸಿ.ಆರ್.ಪಿ.ಸಿ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸಂಪೂರ್ಣವಾಗಿ ಎಸ್ಐಟಿಗೆ ವಹಿಸಲಾಗಿದೆ.

 

ಜಯಂತ್ ದೂರು ಸಹ ಹಸ್ತಾಂತರ: ಇದೇ ವೇಳೆ, ಬೆಳ್ತಂಗಡಿ ತಾಲ್ಲೂಕಿನ ಇಚಿಲಂಪಾಡಿ ನಿವಾಸಿ ಜಯಂತ್ ಟಿ. ಎಂಬುವವರು ನೀಡಿದ್ದ ದೂರು ಅರ್ಜಿಯನ್ನೂ ಎಸ್ಐಟಿಗೆ ವರ್ಗಾಯಿಸಲಾಗಿದೆ. ಜಯಂತ್ ಅವರು ಮೊದಲು ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ದೂರು ನೀಡಲು ತೆರಳಿದ್ದರು. ನಿಯಮಾನುಸಾರ, ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ, ಆಗಸ್ಟ್ 4ರಂದು ಧರ್ಮಸ್ಥಳ ಠಾಣೆಯಲ್ಲಿ ಅವರು ಸಲ್ಲಿಸಿದ್ದ ದೂರರ್ಜಿಯನ್ನು (ಸಂಖ್ಯೆ 200/DPS/2025) ಸ್ವೀಕರಿಸಲಾಗಿತ್ತು.

 ತನಿಖೆ ಎಸ್ಐಟಿ ಹೆಗಲಿಗೆ:  ಡಿಜಿಪಿ ಅವರ ಆದೇಶದ ಹಿನ್ನೆಲೆಯಲ್ಲಿ, ಎರಡೂ ಪ್ರಕರಣಗಳಿಗೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿ (ಎಫ್ಐಆರ್), ಮಹಜರು, ಇದುವರೆಗಿನ ತನಿಖಾ ವರದಿಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ಕೂಡಲೇ ಎಸ್ಐಟಿಗೆ ಹಸ್ತಾಂತರಿಸುವಂತೆ ಧರ್ಮಸ್ಥಳ ಪೊಲೀಸರಿಗೆ ಸೂಚಿಸಲಾಗಿದೆ.ಈಗಾಗಲೇ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ, ಎರಡೂ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಮೂಲಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಿದೆ. ನಿರ್ಧಾರದಿಂದ ಪ್ರಕರಣದ ಹಿಂದಿನ ಸತ್ಯಾಸತ್ಯತೆ ಶೀಘ್ರದಲ್ಲಿಯೇ ಬಯಲಾಗಲಿದೆ ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top