




ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪಡುಬೆಟ್ಟು ಎಂಬಲ್ಲಿ ಬೈಕ್ನಲ್ಲಿ ಬಂದ ಅಪರಿಚಿತರಿಬ್ಬರು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಳ್ಯ ತಾಲೂಕಿನ ಪೆರಾಜೆ ಅಲೆಟ್ಟಿ ಗ್ರಾಮದ ಶಾಂತಿನಗರ ನಿವಾಸಿ ಅಬ್ದುಲ್ ರೆಹಮಾನ್(31ವ.)ಬಂಧಿತ ಆರೋಪಿ.
ಈತನಿಂದ ಚಿನ್ನ ಸಹಿತ ಒಟ್ಟು 5.05 ಲಕ್ಷ ರೂ.ಮೌಲ್ಯದ ಸೋತ್ತು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ವಿವರ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಪಡುಬೆಟ್ಟುವಿನ
ಅಲೀಮಮ್ಮ(65ವ.)ರವರು ನೆರೆಯ ಮುದರು ಎಂಬವರು ಅಸೌಖ್ಯದಲ್ಲಿರುವುದಾಗಿ ತಿಳಿದು ಅವರನ್ನು ವಿಚಾರಿಸಿಕೊಂಡು ಬರಲು ಜೂ.4ರಂದು ಮಧ್ಯಾಹ್ನ
11.15ಕ್ಕೆ ಮನೆಯಿಂದ ಹೊರಟು ಮನೆಯ ಎದುರು ಹಾದು ಹೋಗುವ ರಸ್ತೆಯ ಬದಿ ರಸ್ತೆ ದಾಟಲು ನಿಂತುಕೊಂಡಿರುವ ಸಮಯ ಪಡುಬೆಟ್ಟು ಮುಖ್ಯ ರಸ್ತೆಯಿಂದ ಮಸೀದಿ ಕಡೆಗೆ ಹೋಗುತ್ತಿದ್ದ ಬೈಕ್ ಒಂದರಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕನ್ನು ಅಲೀಮಮ್ಮ ಅವರ ಬಳಿ ನಿಲ್ಲಿಸಿ, ಅವರಲ್ಲಿ ತುಳುವಿನಲ್ಲಿ ’ಸಿದ್ದೀಕ್ನ ಇಲ್ಲ್ ಓಲು, ಪಲ್ಲಿ ಓಲು ’ ಎಂದು ಕೇಳಿ, ಬೈಕಿನ ಹಿಂಬದಿ ಕುಳಿತಿದ್ದ ಅಪರಿಚಿತ ವ್ಯಕ್ತಿ ಒಮ್ಮಲೇ ಬೈಕಿನಿಂದ ಇಳಿದು, ಅಲೀಮಮ್ಮ ಅವರ ಕುತ್ತಿಗೆಯಲ್ಲಿದ್ದ ಸುಮಾರು 10 ಪವನ್ ತೂಕದ ಚಿನ್ನದ ಸರವನ್ನು ಎಳೆದು ಬಲವಂತವಾಗಿ ಕಸಿದುಕೊಂಡು ಹೋಗಿದ್ದರು.
ಕಸಿದುಕೊಂಡು ಹೋದ ಚಿನ್ನದ ಸರದ ಮೌಲ್ಯ ರೂ.5.22 ಲಕ್ಷ ರೂ.ಎಂದು ಅಂದಾಜಿಸಲಾಗಿತ್ತು. ಚಿನ್ನದ ಸರವನ್ನು ಬಲವಂತವಾಗಿ ಕಸಿದುಕೊಂಡು ಹೋದ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಲೀಮಮ್ಮ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಕಲಂ
309(4)ಬಿ ಎನ್ ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ನೆಕ್ಕಿಲಾಡಿಯಲ್ಲಿ ಆರೋಪಿ ಸೆರೆ: ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉಪ್ಪಿನಂಗಡಿ ಪೊಲೀಸರು ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ತಂಡ ರಚಿಸಿಕೊಂಡು ಆರೋಪಿಗಳ ಪತ್ತೆಗೆ ಕಾರ್ಯ ಪ್ರವೃತ್ತರಾಗಿದ್ದರು. ಆರೋಪಿ ಅಬ್ದುಲ್ ರೆಹಮಾನ್ನನ್ನು ಆ.17ರಂದು ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಶಕ್ತಿನಗರ ಎಂಬಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿತನಿಂದ 48 ಗ್ರಾಮ ತೂಕದ 4.54 ಲಕ್ಷ ರೂ.ಮೌಲ್ಯದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ 50 ಸಾವಿರ ರೂ.ಮೌಲ್ಯದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ. ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವೂ ದಾಖಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.