




ಕಡಬ ಟೈಮ್ಸ್, ಪ್ರಮುಖ ಸುದ್ದಿ: ಬೆಂಗಳೂರಿಗೆ ಕೆಲಸಕ್ಕೆಂದು ಮನೆ ಬಿಟ್ಟ ಕಾರವಾರದ ಯುವಕನೋರ್ವ ಕೋಡಿಂಬಾಳದಲ್ಲಿ ಕಾಣಸಿಕ್ಕಿದ್ದು, ಅನುಮಾನಗೊಂಡು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಆ.30 ರ ರಾತ್ರಿ ನಡೆದಿದೆ.
ಕೋಡಿಂಬಾಳ ರೈಲು ನಿಲ್ದಾಣದ ಬಳಿ ಈ ಯುವಕ ಕಾಣಸಿಕ್ಕಿದ್ದ ಎನ್ನಲಾಗಿದ್ದು ಸ್ಥಳೀಯರು ಪ್ರಶ್ನಿಸಿದಾಗ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿಲ್ಲ. ಆತನ ವರ್ತನೆಯಿಂದ ಅನುಮಾನಗೊಂಡು ಸಾರ್ವಜನಿಕರು ಪ್ರಶ್ನಿಸಿದರೂ ಪೋನ್ ನಂಬರ್ ಗೊತ್ತಿಲ್ಲ, ಯಾವುದೇ ದಾಖಲೆ ಇಲ್ಲ ಎಂದು ಹೇಳಿದ್ದ . ಸ್ಥಳೀಯರ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸಿದ್ದರು.
ಕಡಬ ಪೊಲೀಸರು ಕೂಲಂಕಷವಾಗಿ ವಿಚಾರಿಸಿದಾಗ ಕಾರವಾರದ ಬೈತಾಕುಲ್ ನಿವಾಸಿ ಗಿರೀಶ (21ವ ) ಎಂಬ ಮಾಹಿತಿ ತಿಳಿಸಿದ್ದಾನೆ. ಪೊಲೀಸರು ಆತನ ಕುಟುಂಬಸ್ಥರ ವಿವರ ಸಂಗ್ರಹಿಸಿ ಸಂಪರ್ಕಿಸಿದ್ದಾರೆ. ಈ ವೇಳೆ ಕೆಲಸ ಹುಡುಕುತ್ತಾ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಬಂದಿರುವುದಾಗಿ ಕುಟುಂಬಸ್ಥರು ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಲಭ್ಯವಾಗಿದೆ
ಬೆಂಗಳೂರಿಗೆಂದು ಹೊರಟ ಈತ ಮಂಗಳೂರಿಗೆ ತಲುಪಿದ್ದ. ಬಳಿಕ ರೈಲು ಮೂಲಕ ಕೋಡಿಂಬಾಳದಲ್ಲಿ ಇಳಿದಿದ್ದ. ಅನುಮಾನಾಸ್ಪದವಾಗಿ ನಿಂತಿದ್ದ ಕಾರಣ ಸಾರ್ವಜನಿಕರು ಆತಂಕದಿಂದ ಪೊಲೀಸರಿಗೆ ಒಪ್ಪಿಸಿದ್ದರು. ಕುಟುಂಬಸ್ಥರ ಕೋರಿಕೆಯಂತೆ ಬೆಂಗಳೂರಿಗೆ ಕಡಬ ಪೊಲೀಸರು ಕಳುಹಿಸಿದ್ದಾರೆ. ಆತನ ಬಳಿ ಹಣವಿಲ್ಲ ಎಂಬದನ್ನು ಅರಿತ ಪೊಲೀಸರು ಬೆಂಗಳೂರಿಗೆ ಹೋಗಬೇಕಾದ ಪ್ರಯಾಣ ವೆಚ್ಚನೀಡಿ ಕಳುಹಿಸಿದ್ದು ನೆಟ್ಟಣ ರೈಲು ನಿಲ್ದಾಣದ ಮೂಲಕ ತೆರಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಮೂಲಕ ಜನರ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.
ಯುವಕನನ್ನು ಠಾಣೆಯಲ್ಲಿ ವಿಚಾರಿಸಿದ್ದೇವೆ.ಕುಟುಂಬಸ್ಥರ ಜೊತೆ ಖುದ್ದು ನಾನೇ ಮಾತನಾಡಿದ್ದೇನೆ.ಜೊತೆಗೆ ಕಾರವಾರ ಪೊಲೀಸರ ಜೊತೆಗೂ ಮಾತನಾಡಿದ್ದೇನೆ. ಆತನ ಅಸಹಾಯಕ ಸ್ಥಿತಿ ತಿಳಿದು ಬೆಂಗಳೂರಿಗೆ ಹೋಗಲು ಪ್ರಯಾಣ ವೆಚ್ಚ ಭರಿಸಿದ್ದೇವೆ. ಕುಟುಂಬಸ್ಥರ ಕೋರಿಯಂತೆ ಆತನನ್ನು ಕಳುಹಿಸಿ ಕೊಟ್ಟಿದದೇವೆ:-ಅಭಿನಂದನ್ ಎಸ್, ಉಪನಿರೀಕ್ಷಕರು ಕಡಬ ಠಾಣೆ