




ಕಡಬ ಟೈಮ್ (ಪ್ರಮುಖ ಸುದ್ದಿ) : ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತದ ದೈಹಿಕ ಸಂಪರ್ಕ ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ತನ್ನ ವಿರುದ್ದ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ ಜೆ.ರಾವ್ ನನ್ನು
ಪೊಲೀಸರು ಮೈಸೂರಿನ ಟಿ
ನರಸಿಪುರ ಎಂಬಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ಹೈಸ್ಕೂಲ್ ಓದುವ ಸಂದರ್ಭ ಸಹಪಾಠಿಯಾಗಿದ್ದು ಪ್ರಸ್ತುತ ಪದವಿ ವಿದ್ಯಾರ್ಥಿನಿಯಾಗಿರುವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಆಕೆಯನ್ನು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕರೆಸಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದ ಯುವತಿ ಗರ್ಭವತಿಯಾಗಿದ್ದು ಇತ್ತೀಚೆಗಷ್ಟೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಧ್ಯೆ ತನ್ನನ್ನು
ಮದುವೆಯಾಗುವುದಾಗಿ ನಂಬಿಸಿದ್ದ ಶ್ರೀಕೃಷ್ಣ ಜೆ.ರಾವ್ ಇದೀಗ
ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಸಂತ್ರಸ್ತೆ ಆತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿ ತಂದೆಯನ್ನೂ ಜೊತೆಗೆ ಕರೆದೊಯ್ದ ಪೊಲೀಸರು: ಆರೋಪಿಯ ಬಂಧನಕ್ಕೆ ಒತ್ತಡ ಹೆಚ್ಚುತ್ತಲೇ ಪೊಲೀಸರು ಆರೋಪಿಯ ಕುರಿತು ಸುಳಿವು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದರು. ಆರೋಪಿಯ ದೊಡ್ಡಪ್ಪನನ್ನು ಜು.3ರಂದು ಠಾಣೆಗೆ ಕರೆದೊಯ್ದು ಬೆಳಗ್ಗಿನ ತನಕ ಪೊಲೀಸ್ ಠಾಣೆಯಲ್ಲಿ ಕುಳ್ಳರಿಸಿದ್ದ ಪೊಲೀಸರು ಆರೋಪಿಯ ಕುರಿತು ವಿಚಾರಿಸಿದ್ದರು. ಆರೋಪಿ ಪರಾರಿಯಾಗಲು ಸಹಕರಿಸಿದ್ದರೆಂದು ಇಬ್ಬರು ಕಲಾವಿದರನ್ನೂ ಪೊಲೀಸರು ವಿಚಾರಣೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ.
ಆರೋಗ್ಯದಲ್ಲಿ ಏರುಪೇರಾಗಿ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆರೋಪಿ ಶ್ರೀಕೃಷ್ಣ ಜಿ.ರಾವ್ ತಂದೆ ಪಿ.ಜಿ.ಜಗನ್ನಿವಾಸ್ ರಾವ್ ಅವರು ಜು.4ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬೆನ್ನಲ್ಲೇ ಪೊಲೀಸರ ತಂಡ ಅವರನ್ನೂ ತಮ್ಮ ಜೊತೆಗೆ ಕರೆದೊಯ್ದು ಆರೋಪಿಯನ್ನು ಬಂಧಿಸಿ ಕರೆತರುತ್ತಿರುವುದಾಗಿ ವರದಿಯಾಗಿದೆ. ಆರೋಪಿಯ ಬಂಧನಕ್ಕೆ ಒತ್ತಡ ಹೆಚ್ಚಾಗುತ್ತಲೇ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಈ ಮಧ್ಯೆ ಆರೋಪಿಯು ಇತರ ಮೂವರೊಂದಿಗೆ ಕಾರೊಂದರ ಒಳಗೆ ಇದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ, ಪಿ.ಜಿ.ಜಗನ್ನಿವಾಸ್ ರಾವ್ ಅವರು ದಾಖಲಾಗಿದ್ದ ಆಸ್ಪತ್ರೆಗೆ ಬೆಳಿಗ್ಗೆ ಡಿವೈಎಸ್ಪಿ ಅರುಣ್ನಾಗೇಗೌಡ ಮತ್ತು ಪೊಲೀಸ್ ತಂಡ ಭೇಟಿ ನೀಡಿ ಆರೋಪಿಯ ಕುರಿತು ವಿಚಾರಿಸಿತ್ತು. ಈ ವೇಳೆ ಆರೋಪಿ ಪರ ವಕೀಲರು ಮತ್ತು ಸಂಘಟನೆಯ ಕೆಲವು ಮುಖಂಡರೂ ಇದ್ದರು. ಈ ಬೆಳವಣಿಗೆ ಬೆನ್ನಲ್ಲೇ ಪಿ.ಜಿ.ಜಗನ್ನಿವಾಸ್ ರಾವ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಪೊಲೀಸರು ಅವರನ್ನೂ ಜೊತೆಗೆ ಕರೆದೊಯ್ದು ಆರೋಪಿಯ ಪತ್ತೆಗಾಗಿ ತೆರಳಿದ್ದು ಇದೀಗ ಪೊಲೀಸರ ವಶವಾಗಿರುವುದಾಗಿ ತಿಳಿದು ಬಂದಿದೆ.