




ಕಡಬ ಟೈಮ್ಸ್, ನೆಲ್ಯಾಡಿ:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಜುಲೈ 6 ರ ಮುಂಜಾನೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಕೆಲ ಹೊತ್ತು ಸಂಚಾರಕ್ಕೆ ತೊಡಕು ಉಂಟಾಗಿದೆ.
ಗುಡ್ಡ ಕುಸಿತದ ಪರಿಣಾಮವಾಗಿ ರಸ್ತೆಯಲ್ಲಿ ಹಲವು ವಾಹನಗಳು ಸಾಲುಗಟ್ಟಿ ನಿಂತಿದ್ದು, ಬಳಿಕ ಸಂಬಂಧಪಟ್ಟ ಇಲಾಖೆ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಲು ಕ್ರಮಕೈಗೊಂಡಿದೆ.
ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಎತ್ತರದ ಗುಡ್ಡವನ್ನು ಯಾವುದೇ ಮುನ್ನೆಚ್ಚರಿಕೆಯ ಕ್ರಮವಿಲ್ಲದೆ ಕತ್ತರಿಸಿರುವುದರಿಂದ, ಮಳೆಯಾದಾಗ ಗುಡ್ಡ ಕುಸಿತ ಉಂಟಾಗುತ್ತಿದೆ . ಇದು ಈಗಾಗಲೇ ನಾಲ್ಕನೇ ಬಾರಿಗೆ ಸಂಭವಿಸುತ್ತಿದ್ದು, ಸ್ಥಳೀಯರಲ್ಲಿ ಭಯ ಹೆಚ್ಚಾಗಿದೆ. ಶಿರೂರು ದುರಂತವನ್ನು ನೆನಪಿಸುತ್ತಾ ವಾಹನ ಸವಾರರು ಆತಂಕದಲ್ಲಿ ವಾಹನ ಚಲಾಯಿಸುತ್ತಿದ್ದಾರೆ.
ಈ ಹೆದ್ದಾರಿಯಲ್ಲಿ ನಿರಂತರ ಅನಾಹುತಗಳು ಸಂಭವಿಸುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿದೆ. ಇದಕ್ಕೂ ಮುನ್ನ ಗುತ್ತಿಗೆದಾರರ ನಿರ್ಲಕ್ಷ್ಯವನ್ನು ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.