




ಕಡಬ ಟೈಮ್ಸ್ ,ಪ್ರಮುಖ ಸುದ್ದಿ : ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಡಬ ಮೂಲದ ಆರೋಪಿ ಸಹಿತ ಇಬ್ಬರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಕಡಬ
ತಾಲೂಕಿನ ಕೊಯಿಲ ಗ್ರಾಮದ ಆತೂರುಬೈಲ್ ಕಲಾಯಿ ನಿವಾಸಿ ಪ್ರಸ್ತುತ ಕುಂಬಳೆ ಮೊಗ್ರಾಲ್ ಪುತ್ತೂರು ಶಾಸ್ತಾ ನಗರದಲ್ಲಿ ವಾಸವಾಗಿದ್ದ ಇಬ್ರಾಹಿಂ
ಕಲಂದರ್ ಮತ್ತು ಕುಂಬಳೆ ಉರ್ಮಿಚಾಲ್ ಬೇಕೂರು ನಿವಾಸಿ ರಿಯಾಜ್ ಯಾನೆ ಕಡಪು ರಿಯಾಜ್ ಬಂಧಿತರು.
ಪಾದೆಬೆಟ್ಟು
ಗ್ರಾಮದ ಕಾಮತ್ ಪೆಟ್ರೋಲ್ ಬಂಕ್ ಬಳಿಯ ಗಣೇಶ್ ಪ್ರಸಾದ್ ಶೆಟ್ಟಿ ಅವರ ಮನೆಯ ಬಾಗಿಲನ್ನು ಒಡೆದು ಮನೆಯ
ಒಳಗೆ ನುಗ್ಗಿದ್ದ ಈ ಕಳ್ಳರು 1.20 ಲಕ್ಷ ರೂ. ನಗದು ಮತ್ತು 25 ಸಾವಿರ ರೂ. ಮೌಲ್ಯದ ಒಂದು ಚಿನ್ನದ
ಸರವನ್ನು ಕಳ್ಳತನ ಮಾಡಿದ್ದರು. ಮನೆಗೆ ಪ್ರವೇಶಿಸುವ
ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲೂ ದಾಖಲಾಗಿದ್ದವು. ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು
ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ
ಕಳ್ಳತನಕ್ಕೆ ಉಪಯೋಗಿಸಿದ ಟಾಟಾ ಪಂಚ್ ಕಾರು ಮತ್ತು 25 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಇವರೀರ್ವರೂ ಪಡುಬಿದ್ರಿ, ಕೋಟ ಮತ್ತು ಕುಂದಾಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು
ಪ್ರಕರಣಗಳಲ್ಲೂ ಭಾಗಿಯಾಗಿರುತ್ತಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಲಂದರ್ ವಿರುದ್ದ 16ಕ್ಕೂ ಹೆಚ್ಚು ಪ್ರಕರಣ : ಇಬ್ರಾಹಿಂ ಕಲಂದರ್ ಮೇಲೆ ಈಗಾಗಲೇ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ 2 ದೇವಸ್ಥಾನ ಕಳವು, ವಿದ್ಯಾನಗರ ಠಾಣೆಯಲ್ಲಿ 1 ಮನೆ ಕಳವು, ಮಂಜೇಶ್ವರ ಠಾಣೆಯಲ್ಲಿ 1 ದರೋಡೆಗೆ ಪ್ರಯತ್ನ, ಮೇಲ್ಪರಂಬ ಠಾಣೆಯಲ್ಲಿ ಮನೆ ಕಳವು ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ಠಾಣೆಯಲ್ಲಿ ಮುನಿಯಾಲು ಸೊಸೈಟಿ ದರೋಡೆ, ವಿಟ್ಲ ಠಾಣೆಯಲ್ಲಿ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ, ಮೂಡುಬಿದಿರೆ ಠಾಣೆಯಲ್ಲಿ ಅಡಿಕೆ ಕಳವು ಪ್ರಕರಣ, ಪುತ್ತೂರು ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ 4 ಮನೆ ಕಳವು ಪ್ರಕರಣ, ಕಡಬ ಠಾಣೆಯಲ್ಲಿ ಸರ ಕಳ್ಳತನ, ಉಪ್ಪಿನಂಗಡಿ ಮತ್ತು ಬಂಟ್ವಾಳ ಗ್ರಾಮಾಂತರ ಠಾಣೆಗಳಲ್ಲಿ ಅಂಗಡಿ ಕಳವು, ಮಡಿಕೇರಿ ಜಿಲ್ಲೆಯ ಕುಶಾಲನಗರ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದ್ದು ಕಳೆದ ಫೆಬ್ರವರಿಯಲ್ಲಿ ಕೇರಳ ರಾಜ್ಯದ ಹೊಸದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿದ್ದ.