




ಕಡಬ: ದಕ್ಷಿಣ ಕನ್ನಡ ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆ, ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ , ಕಡಬ ಪಶು ಆಸ್ಪತ್ರೆ ಆಶ್ರಯದಲ್ಲಿ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ವಠಾರದಲ್ಲಿ 2024-025 ನೇ ಸಾಲಿನ ಅಮೃತ ಸಿರಿ ಯೋಜನೆಯಡಿಯಲ್ಲಿ 11 ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರುಗಳ ವಿತರಣೆ ಮಂಗಳವಾರ ನಡೆಯಿತು.
ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ವಿತರಿಸಿ, ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಪಡೆಯುವ ಫಲಾನುಭವಿಗಳು ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯೋಜನೆಯ ಮಹತ್ವ ಸಕಾರಗೊಳ್ಳುತ್ತದೆ. ಫಲಾನುಭವಿಗಳು ಪಡೆದ ಗೋವುಗಳನ್ನು ಉತ್ತಮ ರೀತಿಯಲ್ಲಿ ಸಾಕಿ ಪ್ರಯೋಜನ ಪಡೆದುಕೊಳ್ಳಬೇಕು. ಗೋವುಗಳಲ್ಲಿ ದೇಶಿ ತಳಿಗಳು ಅಪರೂಪವಾಗುತ್ತಿರುವ ಕಾಲಘಟ್ಟದಲ್ಲಿ ಮಲೆನಾಡು ಗಿಡ್ಡ ತಳಿಗಳನ್ನು ಬೆಳೆಸುವ ಕಾರ್ಯ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಕೊಯಿಲ ಗ್ರಾ.ಪಂ ಸದಸ್ಯ ಹರ್ಷಿತ್ ಕುಮಾರ್, ಆಲಂಕಾರು ಸಿ ಎ ಬ್ಯಾಂಕ್ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಬಿಜೆಪಿ ಮುಖಂಡ ಲಕ್ಷ್ಮೀ ನಾರಾಯಣ ರಾವ್ ಆತೂರು ಉಪಸ್ಥಿತರಿದ್ದರು. ಪಶುಪಾಲನೆ ಇಲಾಖಾ ಕಡಬ ತಾಲೂಕು ಮುಖ್ಯ ಪಶುವೈದ್ಯಾದಿಕಾರಿ ಡಾ. ಅಜಿತ್ ಎಂ ಸಿ ಯೋಜನೆಯ ಮಾಹಿತಿ ನೀಡಿದರು. ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಉಪನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಸ್ವಾಗತಿಸಿ ನಿರೂಪಿಸಿದರು. ಸುಬ್ರಹ್ಮಣ್ಯದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಮಲ್ಲಿಕಾ ವಂದಿಸಿದರು.