






ಕಡಬ ಟೈಮ್ಸ್, ನೆಲ್ಯಾಡಿ: ಅಡಿಕೆಗೆ ಔಷಧಿ ಸಿಂಪಡಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಲೈನ್‌ಗೆ ದೋಟಿ ತಗುಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ರೆಖ್ಯಾ ಗ್ರಾಮದ ಪರ್ಕಳ ಎಂಬಲ್ಲಿ ಜೂ.28ರಂದು ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಅರಸಿನಮಕ್ಕಿ ಸಮೀಪದ ಉಡ್ಯೆರೆ ನಿವಾಸಿ ಕೃಷ್ಣಪ್ಪ ಕುಲಾಲ್(49ವ.) ಎಂದು ಗುರುತಿಸಲಾಗಿದೆ.
ರೆಖ್ಯಾ ಗ್ರಾಮದ ಪರ್ಕಳ ಎಂಬಲ್ಲಿ ತೋಟವೊಂದರಲ್ಲಿ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುತ್ತಿರುವ ಸಂದರ್ಭ ದೋಟಿ ತೋಟದಲ್ಲಿ ಹಾದು ಹೋಗಿದ್ದ ಎಚ್‌ಟಿ ಲೈನ್‌ಗೆ ಸ್ಪರ್ಶಿಸಿದೆ. ಇದರಿಂದಾಗಿ ವಿದ್ಯುತ್ ಶಾಕ್‌ಗೆ ಒಳಗಾಗಿದ್ದಾರೆ. ತಕ್ಷಣ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆ ತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಬಳಿಕ ಮೃತ ದೇಹವನ್ನು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ಅರಸಿನಮಕ್ಕಿ ಕುಲಾಲ್ ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.