ಕಡಬ: ಕೂರತ್ ತಂಙಳ್ ಉರೂಸ್: ನಿರೀಕ್ಷೆ ಮೀರಿದ ಜನಸಾಗರ-ಉಸಿರುಗಟ್ಟಿ ಹಲವರು ಅಸ್ವಸ್ಥ,ಆಸ್ಪತ್ರೆಗೆ ದಾಖಲು

ಕಡಬ: ಕೂರತ್ ತಂಙಳ್ ಉರೂಸ್: ನಿರೀಕ್ಷೆ ಮೀರಿದ ಜನಸಾಗರ-ಉಸಿರುಗಟ್ಟಿ ಹಲವರು ಅಸ್ವಸ್ಥ,ಆಸ್ಪತ್ರೆಗೆ ದಾಖಲು

Kadaba Times News

ಕಡಬ: ಕುದ್ಮಾರ್ ಕೂರತ್ ಫಝಲ್ ನಗರದಲ್ಲಿ ‘ಕೂರತ್ ತಂಙಳ್’ ಎಂದೇ ಪ್ರಸಿದ್ಧರಾಗಿದ್ದ ಸಯ್ಯದ್ ಫಝಲ್ ಕೊಯಮ್ಮ ತಂಙಳ್ ಅಲ್ ಬುಖಾರಿ ಅವರ ಸ್ಮರಣಾರ್ಥ ನಡೆದ ವಾರ್ಷಿಕ ಉರೂಸ್ ಮುಬಾರಕ್‌ನ ಕೊನೆಯ ದಿನವಾದ ಭಾನುವಾರ ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದ ಪರಿಣಾಮ, ನೂಕುನುಗ್ಗಲಿನಲ್ಲಿ ಹಲವರು ಅಸ್ವಸ್ಥಗೊಂಡ ಘಟನೆ ನಡೆದಿದೆ. 



ಜೂನ್ 26ರಿಂದ 29ರವರೆಗೆ ಆಯೋಜಿಸಲಾಗಿದ್ದ ಉರೂಸ್‌ನ ಅಂತಿಮ ದಿನದ ಪ್ರಾರ್ಥನೆ ಹಾಗೂ ಅನ್ನದಾನ ಕಾರ್ಯಕ್ರಮಕ್ಕೆ ಸುಮಾರು 30-40 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿತ್ತು. ಆದರೆ, ತಂಙಳ್ ಅವರ ಮೇಲಿನ ಅಭಿಮಾನದಿಂದಾಗಿ ರಾಜ್ಯದ ನಾನಾ ಭಾಗಗಳಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಜನಸಂದಣಿ ಹೆಚ್ಚಾಗಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಗಂಟೆಗಟ್ಟಲೆ ಪರದಾಡಿರುವುದಾಗಿ ತಿಳಿದು ಬಂದಿದೆ. 


ಹಲವರು ಆಸ್ಪತ್ರೆಗೆ ದಾಖಲು: ಕಿಕ್ಕಿರಿದು ತುಂಬಿದ್ದ ಜನಸಂದಣಿಯಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ ಮೂವರು ಯುವತಿಯರು ಸೇರಿದಂತೆ  ಆರು ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಮೂವರನ್ನು ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯವಾಗಿ ಆರೋಗ್ಯ ಇಲಾಖೆ ತೆರೆದಿದ್ದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಅಸ್ವಸ್ಥಗೊಂಡ ಮಹಿಳೆಯರಿದ್ದ ಸ್ಥಳಕ್ಕೆ ಆಂಬುಲೆನ್ಸ್ ತಲುಪಿಸಲು ಆಯೋಜಕರು ಮತ್ತು ಪೊಲೀಸರು ಹರಸಾಹಸ ಪಡಬೇಕಾಯಿತು.  ಆಂಬುಲೆನ್ಸ್‌ಗಳು ಸ್ಥಳಕ್ಕೆ ದೌಡಾಯಿಸಿದರೂ, ಜನಜಂಗುಳಿಯ ಕಾರಣ ಅವುಗಳಿಗೆ ದಾರಿ ಮಾಡಿಕೊಡಲು ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಭಾನುವಾರ ಮುಂಜಾನೆಯಿಂದಲೇ ಲಕ್ಷಾಂತರ ಮಂದಿ ವಾಹನಗಳಲ್ಲಿ ಆಗಮಿಸಿದ್ದರಿಂದ ಉರೂಸ್ ನಡೆಯುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ಸಂಚಾರ ದಟ್ಟಣೆ ಉಂಟಾಗಿತ್ತು. ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಯ ಸವಣೂರಿನಿಂದ ಬರೆಪ್ಪಾಡಿಯವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. 


ಕುದ್ಮಾರ್ ಸುತ್ತಮುತ್ತ ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಾಣಿಲ-ಕುದ್ಮಾರು, ಶಾಂತಿಮೊಗರು-ಆಲಂಕಾರು ರಸ್ತೆಗಳಲ್ಲೂ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.


ಈ ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿ, ದಿನಾಂಕ 29.06.2025 ರಂದು ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಫ್ತಿಯ ಕುದ್ಮಾರ್ ಗ್ರಾಮಾದ ಕೂರತ್ ಮಸೀದಿ ಯಲ್ಲಿ ಉರುಸ್ ಕಾರ್ಯಕ್ರಮ ನಡೆಯುತ್ತಿದ್ದು, ಈ ವೇಳೆ ಸದ್ರಿ ಕಾರ್ಯಕ್ರಮಕ್ಕೆ ಬೇರೆ ಬೇರೆ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿರುತ್ತಾರೆ. ಜನದಟ್ಟಣೆಯಲ್ಲಿ 06 ಜನರು ದೈಹಿಕವಾಗಿ ನಿತ್ರಾಣಗೊಂಡಿದ್ದು, ಅವರುಗಳನ್ನು ಸ್ಥಳದಲ್ಲಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಚರಿಸಲಾಗಿ  ಇಬ್ಬರ ಆರೋಗ್ಯ ಸ್ಥಳದಲ್ಲೇ ಸುಧಾರಿಸಿರುತ್ತದೆ. ಉಳಿದ 04 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿರುತ್ತಾರೆ. ಸದ್ರಿ ಉರುಸ್ ಕಾರ್ಯಕ್ರಮ ಮುಕ್ತಾಯಗೊಂಡಿರುತ್ತದೆ. ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳು ಹರಡದಂತೆ ಹಾಗೂ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದಾಗಿ ವಿನಂತಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top