




ಕಡಬ ಟೈಮ್ಸ್ (KADABA TIMES) : ಧರ್ಮಸ್ಥಳದಿಂದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆರಿಯಶಾಂತಿ ವರೆಗೆ ಹೆದ್ದಾರಿಯ ಎರಡೂ ಬದಿಯಲ್ಲಿ ಹಲವು ಅನಧಿಕೃತ ಅಂಗಡಿಗಳು ತೆರೆದಿದೆ. ಜೀವನ ನಿರ್ವಹಣೆಗಾಗಿ ಅಂಗಡಿಗಳನ್ನು ತೆರೆದಿದ್ದರೂ ಅನುಮತಿ ಪಡೆಯದಿರುವುದರಿಂದ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಲೊಕೊಪಯೋಗಿ ಇಲಾಖೆ ಮತ್ತು ಕಂದಾಯ ಇಲಾಖೆ,ಅರಣ್ಯ ಇಲಾಖೆ ಈಗ ಮತ್ತೊಮ್ಮೆ ಅಂಗಡಿಗಳನ್ನು ತೆರವುಗೊಳಿಸಲು ಸೂಚನೆ ನೀಡಿದೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಯ ಹಿತ ದೃಷ್ಟಿಯಿಂದ ಜುಲೈ 15 ರೊಳಗಾಗಿ ಅಂಗಡಿಗಳನ್ನು ತೆರವುಗೊಳಿಸಲು ಅಂತಿಮ ಗಡುವು ನಿಗದಿಪಡಿಸಿ ಎಲ್ಲಾ ಅಂಗಡಿ ವ್ಯಾಪಾರಿಗಳು ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ. ಪ್ರವಾಸಿಗರು ರಸ್ತೆಯಲ್ಲಿ ವಾಹನ ನಿಲ್ಲಿಸಿ ಅಂಗಡಿಗೆ ಹೋಗುತ್ತಿದ್ದು ಇದರಿಂದ ರಸ್ತೆಯಲ್ಲಿ ಹೋಗುವ ಇತರೆ ಸವಾರರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಮೂರು ವರ್ಷಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್ಸೊಂದು ಅಂಗಡಿ ಪಕ್ಕ ನಿಂತಿದ್ದವರಿಗೆ ಹಾಗೂ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿ 7 ಮಂದಿ ಗಂಭೀರ ಗಾಯಗೊಂಡಿದ್ದರು. ಈ ಘಟನೆಗೆ ಪೆರಿಯಶಾಂತಿ ರಾಜ್ಯ ಹೆದ್ದಾರಿ ಬದಿಯ ಅನಧಿಕೃತ ಅಂಗಡಿಗಳೇ ಕಾರಣವಾಗುತ್ತಿವೆ ಎಂಬ ದೂರು ಬಂದಿತ್ತು. ಹೀಗಾಗಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಲೋಕೋಪಯೋಗಿ ಇಲಾಖೆ ಕುದ್ರಾಯದಿಂದ ನೆಲ್ಯಾಡಿ ಸಮೀಪದ ಪೆರಿಯಶಾಂತಿವರೆಗಿನ ಹೆದ್ದಾರಿ ಬದಿಯ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿತ್ತು.
ಬೆಳ್ತಂಗಡಿ
ಲೋಕೋಪಯೋಗಿ ಇಲಾಖೆಯ ಇಂಜಿನಿಯರಿಂಗ್ ಕಡಬ
ಮತ್ತು ಬೆಳ್ತಂಗಡಿ ಕಂದಾಯ ಇಲಾಖೆಯ ನೇತೃತ್ವದಲ್ಲಿ ಧರ್ಮಸ್ಥಳ ,ಉಪ್ಪಿನಂಗಡಿ ಪೊಲೀಸರ ಸಹಕಾರದಲ್ಲಿ ಅಂಗಡಿಗಳನ್ನು ಕಟ್ಟಿಂಗ್ ಮೇಷಿನಿಂದ ತುಂಡರಿಸಿ ನಂತರ ಜೆಸಿಬಿ ಮೂಲಕ ಕಾರ್ಯಾಚರಣೆ ಮಾಡಿ ಧ್ವಂಸ ಮಾಡಲಾಗಿತ್ತು.
ಅಂದು ಅಂಗಡಿ ತೆರವಿಗೆ ವರ್ತಕರಿಂದ ವಿರೋಧ ವ್ಯಕ್ತವಾಗದೇ ಇದ್ದರೂ ಏಕಾಏಕಿ ಅಂಗಡಿ ತೆರವುಗೊಳಿಸಲಾಗಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದವರು ಹಾಗೂ ವ್ಯಾಪಾರಿಗಳು ಆರೋಪಿಸಿದ್ದರು. ಪರ್ಯಾಯ ವ್ಯವಸ್ಥೆ ಮಾಡದಿದ್ದಲ್ಲಿ ತೆರವುಗೊಂಡ ಜಾಗದಲ್ಲೇ ವಾಹನದಲ್ಲಿ ಹಣ್ಣು ಹಂಪಲು ಇಟ್ಟು ವ್ಯಾಪಾರ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದರು. ನಂತರದ ದಿನಗಳಲ್ಲಿ ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಅನಧಿಕೃತ ಅಂಗಡಿಗಳು ತಲೆ ಎತ್ತಿದ್ದವು.ಇದಕ್ಕೆ ರಾಜಕೀಯ ಮುಖಂಡರೂ ಪರೋಕ್ಷವಾಗಿ ಬೆಂಬಲ ನೀಡಿದ್ದರು ಎನ್ನಲಾಗಿತ್ತು. ಇದೀಗ ಮುಂಚಿತವಾಗಿ ಎಲ್ಲಾ ಅಂಗಡಿಗಳನ್ನು ಮುಂದಿನ ಹದಿನೈದು ದಿನಗಳ ಒಳಗೆ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.