




ಕಡಬ ಟೈಮ್, ಕುಕ್ಕೆ ಸುಬ್ರಹ್ಮಣ್ಯ: ಕೆಲ ದಿನಗಳ ಹಿಂದೆ ಇಲ್ಲಿನ ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬದಲ್ಲಿ ಬ್ಯಾನರ್ ಅಳವಡಿಸಿರುವ ಬಗ್ಗೆ ಮಾದ್ಯಮಗಳಲ್ಲಿ ವರದಿಯಾದ ಬಳಿಕ ಬ್ಯಾನರ್ ಬೇರೆ ಕಡೆ ಅಳವಡಿಸಲಾಗಿತ್ತು. ಇದೀಗ ಸುಬ್ರಹ್ಮಣ್ಯ ಗ್ರಾ.ಪಂ ವ್ಯಾಪ್ತಿಯ ಕೆಲವೆಡೆ ಮತ್ತೆ ವಿದ್ಯುತ್ ಬ್ಯಾನರ್ ಗಳು ಪ್ರತ್ಯಕ್ಷಗೊಂಡಿದೆ.
![]() |
ಸುಬ್ರಹ್ಮಣ್ಯ ಗ್ರಾ.ಪಂ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬದಲ್ಲಿ ಇರುವ ಬ್ಯಾನರ್ ಗಳು |
ಹೊಸವರ್ಷದ ಪಾರ್ಟಿಗೆ ಸಂಬಂಧಿಸಿದ ಬ್ಯಾನರ್ ಸೇರಿದಂತೆ ಜಾಹೀರಾತಿನ ಫಲಕಗಳು ವಿದ್ಯುತ್ ಕಂಬದ ಆಸರೆ ಪಡೆದಿದೆ. ಯಾವುದೇ ಜಾಹೀರಾತು ಅಥವಾ ಪ್ರಚಾರದ ಬ್ಯಾನರ್ ಗಳನ್ನು ಕರೆಂಟು ಕಂಬದಲ್ಲಿ ಅಳವಡಿಸಲು ಅನುಮತಿ ಇರುವುದಿಲ್ಲ. ಆದರೂ ಸುಲಭ ಆಗಲೆಂದು ಸಾರ್ವಜನಿಕ ಆಸ್ತಿಗಳಲ್ಲಿ ಸಿಕ್ಕಿಸುವುದು ಮಾಮೂಲಿಯಾಗಿದೆ.
ಗ್ರಾ.ಪಂ, ಮೆಸ್ಕಾಂ ಅಧಿಕಾರಿಗಳು ಬರೇ ಮೌಖಿಕ ಸೂಚನೆ ಮೂಲಕ ಬ್ಯಾನರ್ ಹಾಕಿದವರಿಗೆ ಸೂಚನೆ ನೀಡುತ್ತಾರೆ ವಿನ: ಎಚ್ಚರಿಕೆ ರೂಪದಲ್ಲಿ ಕ್ರಮ ಜರುಗಿಸಿರುವ ಉದಾಹರಣೆಗಳಿಲ್ಲ. ನಿರ್ದಿಷ್ಟ ಸ್ಥಳದಲ್ಲಿ ಜಾಹೀರಾತು ಹಾಕಲು ಗ್ರಾ.ಪಂ ಅಧಿಕಾರಿಗಳು ಅನುಮತಿ ನೀಡುತ್ತಾರೆ . ಗ್ರಾ.ಪಂ ವತಿಯಿಂದ ಅನುಮತಿ ಪಡೆದರೂ ವಿದ್ಯುತ್ ಕಂಬಕ್ಕೆ ಜಾಹೀರಾತು ಫಲಕ ಹಾಕುವಂತಿಲ್ಲ.
ವಿದ್ಯುತ್ ಕಂಬಗಳಲ್ಲಿ ಜಾಹೀರಾತು ಕಂಡು ಬಂದರೆ ಸಾರ್ವಜನಿಕ ಸೊತ್ತು ನಾಶಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಅಧಿಕಾರಿಗಳಿಗೆ ಅವಕಾಶವಿದೆ.ಈ ಹಿಂದೆ ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗದ ಎಇಇ ಸತೀಶ್ ಅವರು ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಕಂಬಗಳಿಗೆ ಯಾವುದೇ ಫಲಕ ಹಾಕಲು ಅನುಮತಿ ಇರುವುದಿಲ್ಲ. ಈ ಬಗ್ಗೆ ಗಮನ ಹರಿಸಲಾಗುವುದು ಎಂದರು.