




ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಲ್ಲಂತಡ್ಕ ಬಳಿ ಎಡೆಬಿಡದೆ ಸುರಿದ ಮಳೆಗೆ ಚರಂಡಿಯಲ್ಲಿ ಸಮರ್ಪಕ ನೀರು ಹರಿದು ಹೋಗದ ಕಾರಣ ರಸ್ತೆಯಲ್ಲೇ ನೀರು ನಿಂತು ವಾಹನಗಳ ಓಡಾಟಕ್ಕೆ ಅಡಚಣೆ ಉಂಟಾಗಿತ್ತು.
ಇದೀಗ ಕಡಬ ಟೈಮ್ ವರದಿ ಬೆನ್ನಲ್ಲೇ ಪಟ್ಟಣ ಪಂಚಾಯತ್ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದಾರೆ. ಸ್ಥಳೀಯರೊಬ್ಬರು ಚರಂಡಿಗೆ ಮಣ್ಣು ಹಾಕಿ ಮುಚ್ಚಿದ ಕಾರಣ ನೀರು ಸಮರ್ಪಕವಾಗಿ ಹರಿಯದೆ ರಸ್ತೆಯಲ್ಲೇ ನಿಂತು ಸಣ್ಣ ಹೊಳೆಯಂತೆ ಕಾಣುತ್ತಿತ್ತು.
ಪ.ಪಂ ಅಧಿಕಾರಿಗಳು ಸ್ಥಳಕ್ಕೆ ಬಂದ ವೇಳೆ ಸ್ಥಳೀಯರು ತಕರಾರು ಎಬ್ಬಿಸಿ ತಮ್ಮ ಜಾಗದ ಮೂಲಕ ಚರಂಡಿಯಲ್ಲಿ ನೀರು ಹರಿಯಲು ಬಿಡುವುದಿಲ್ಲವೆಂದು ತಗಾದೆ ತೆಗೆದಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿಗಳ ಜೊತೆ ಅಧಿಕಾರಿಗಳು ಮಾತುಕತೆ ನಡೆಸಿ ವಸ್ತುಸ್ಥಿತಿ ಮನವರಿಕೆ ಮಾಡಿದ ಬಳಿಕ ಒಪ್ಪಿಕೊಂಡಿದ್ದಾರೆ.
ಲೋಕೋಪಯೋಗಿ ಇಲಾಖೆ ಮಾಡಬೇಕಾದ ಕೆಲಸವಾದರೂ ಪಟ್ಟಣ ಪಂಚಾಯತ್ ಜೆಸಿಬಿ ಬಳಸಿ ಎರಡೂ ಕಡೆಯೂ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದೆ. ಸ್ಥಳಕ್ಕೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ.ಇ, ಸಿಬ್ಬಂದಿ ಶಾಖೆಯ ಹರೀಶ್ ಬೆದ್ರಾಜೆ ಹಾಗೂ ಸಿಬ್ಬಂದಿಗಳು ಹಾಜರಿದ್ದರು .