ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸುಳ್ಯದ ಪರಿಶಿಷ್ಟ ವರ್ಗದ ಮಹಿಳೆ: ನೆರವಾಗಿ ಇಲ್ಲ ದಯಾಮರಣ ಕರುಣಿಸಿ' ಎಂದು ಸಿಎಂ‌ಗೆ ಪತ್ರ

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸುಳ್ಯದ ಪರಿಶಿಷ್ಟ ವರ್ಗದ ಮಹಿಳೆ: ನೆರವಾಗಿ ಇಲ್ಲ ದಯಾಮರಣ ಕರುಣಿಸಿ' ಎಂದು ಸಿಎಂ‌ಗೆ ಪತ್ರ

Kadaba Times News
ದಕ್ಷಿಣ ಕನ್ನಡ/ಸುಳ್ಯ: ಇಲ್ಲಿನ ನಾವೂರು ಎಂಬಲ್ಲಿನ ಬಡ ಕುಟುಂಬದ ಚಾಂದಿನಿ ಜಿ.ಡಿ. (33) ಎಂಬುವರು 'ಹೈಪರ್ ಐಜಿಇ ಸಿಂಡ್ರೋಮ್' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ವೆಚ್ಚ ಭರಿಸಲು ಸರ್ಕಾರದ ನೆರವು ಕೋರಿ ಪತ್ರ ಬರೆದಿದ್ದು,  ನೆರವು ಸಾಧ್ಯವಿಲ್ಲದಿದ್ದರೆ ದಯಾಮರಣವನ್ನಾದರೂ ಕರುಣಿಸಿ ಎಂದು ಸಿಎಂ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಇ- ಮೇಲ್ ಕಳುಹಿಸಿದ್ದಾರೆ.

ನನ್ನ ಕಾಯಿಲೆಗೆ ಊರಿನಲ್ಲಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‍ನ ಎಐಜಿ ಆಸ್ಪತ್ರೆಗೆ ದಾಖಲಾಗುವಂತೆ ಊರಿನ ವೈದ್ಯರು ಸಲಹೆ ನೀಡಿದ್ದರು. ನನಗೆ ಅತ್ಯಂತ ಅಪರೂಪವಾದ 'ಹೈಪರ್ ಐಜಿಇ ಮೆಡಿಕೇಟೆಡ್ ಸೆಲ್ ಆಕ್ಟಿವೇಷನ್ ಸಿಂಡ್ರೋಮ್' ಕಾಯಿಲೆ ಇರುವುದನ್ನು ಆ ಆಸ್ಪತ್ರೆಯವರು ಪತ್ತೆ ಹಚ್ಚಿದ್ದರು. ತೀವ್ರತರವಾದ ಅಲರ್ಜಿಯನ್ನುಂಟು ಮಾಡುವ (ಅನಫಿಲ್ಯಾಕ್ಸಿಸ್) ಈ ಕಾಯಿಲೆಗೆ ಅಲ್ಲಿ ಒಮ್ಮೆ ಚಿಕಿತ್ಸೆ ಪಡೆದು ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ್ದೆ. ಅಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಲಭ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. 

ಬೆಂಗಳೂರಿನ ಕೆಲವು ಆಸ್ಪತ್ರೆಯಲ್ಲಿ ಇದಕ್ಕೆ ಚಿಕಿತ್ಸೆ ಲಭ್ಯವಿದೆ ಎಂದು ತಿಳಿದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಅಲ್ಲಿಂದ ಉತ್ತರ ಬಂದಿರಲಿಲ್ಲ' ಎಂದು ಚಾಂದಿನಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ

'ಈ ನಡುವೆ ಆರೋಗ್ಯ ಏರುಪೇರಾಗಿದ್ದರಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಹೈದರಾಬಾದ್‍ನ ಎಐಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದೆ. ಊರಿನವರು ಆಂಬುಲೆನ್ಸ್ ಮಾಡಿಕೊಡುವ ಮೂಲಕ ನೆರವಾಗಿದ್ದರು. ಚಿಕಿತ್ಸೆ ವೆಚ್ಚ ಭರಿಸುವ ಬಗ್ಗೆ ಆರೋಗ್ಯ ಇಲಾಖೆಯಿಂದ ಪತ್ರ ಬಾರದ ಕಾರಣಕ್ಕೆ ಎಐಜಿ ಆಸ್ಪತ್ರೆಯವರು ಎರಡು ಸಲ ಚಿಕಿತ್ಸೆ ನಿಲ್ಲಿಸಿದ್ದರು. 
ಸರ್ಕಾರದಿಂದ ಭರವಸೆ ಸಿಗುತ್ತಿದೆಯಾದರೂ, ಚಿಕಿತ್ಸೆಗೆ ಹಣದ ನೆರವು ಸಿಗುತ್ತಿಲ್ಲ. ಹಾಗಾಗಿ ದಯಾಮರಣ ಕೋರಿ ಈ ಪತ್ರ ಬರೆಯುತ್ತಿದ್ದೇನೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಇನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೂ ನನ್ನನ್ನು ಬದುಕಿಸಿ ಎಂದು ಮನವಿ ಮಾಡಿದ್ದಾರೆ.
 
ಪರಿಶಿಷ್ಟ ಪಂಗಡ ಸಮುದಾಯದ ಧನಂಜಯ ನಾಯ್ಕ್ ಅವರ ಮಗಳಾದ ಚಾಂದಿನಿ ಅವರಿಗೆ ಮದುವೆಯಾಗಿದ್ದು, ಒಂದು ಮಗುವಿದೆ. ಈ ಕುಟುಂಬ ತೀರಾ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದು, ಕುಟುಂಬ ನಿರ್ವಹಣೆ ಮತ್ತು ಚಿಕಿತ್ಸೆ ವೆಚ್ಚ ಭರಿಸುವುದು ಕಷ್ಟವಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top