




ಕುಕ್ಕೆ ಸುಬ್ರಹ್ಮಣ್ಯ: ಪೂಜೆ ನೆರೆವೇರಿಸಲು ಕುಟುಂಬದ ಜೊತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಅನ್ನಛತ್ರಕ್ಕೆ ತೆರಳುತ್ತಿದ್ದ ವೇಳೆ ನಾಪತ್ತೆಯಾಗಿದ್ದು ಹುಡುಕಾಟ ನಡೆಸಿ ಕೊನೆಗೆ ಠಾಣೆಗೆ ದೂರು ನೀಡಿದ ಘಟನೆ ತಡವಾಗಿ ವರದಿಯಾಗಿದೆ.
ಕೊಡಗುಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಚನ್ನಂಗುಳಿ ಗ್ರಾಮದ ರಘು(49ವ) ನಾಪತ್ತೆಯಾದವರು.
ಜೂನ್ 24ರಂದು ಮೂವತ್ತು ಕುಟುಂಬ ಸದಸ್ಯರೊಂದಿಗೆ ಎರಡು ದಿನಗಳ ಕಾಲ ಪೂಜೆ ನೆರವೇರಿಸುವ ಸಲುವಾಗಿ ಆಗಮಿಸಿದ್ದರು. ಪೂಜೆಯ ಬಳಿಕ ಅನ್ನ ಪ್ರಸಾದ ಸ್ವೀಕರಿಸಲು ತೆರಳುತ್ತಿದ್ದ ಸಮಯದಲ್ಲಿ ಕುಟುಂಬ ಬಳಗದಿಂದ ತಪ್ಪಿಸಿಕೊಂಡಿದ್ದಾರೆ. ಕುಕ್ಕೆ ದೇಗುಲದ ಸುತ್ತಮುತ್ತ ಹುಡುಕಾಟ ನಡೆಸಿದರೂ ,ಅಂಗಡಿಗಳಲ್ಲಿ ಪೋಟೊ ತೋರಿಸಿ ವಿಚಾರಿಸಿದರೂ ಪತ್ತೆಯಾಗದ ಕಾರಣ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.
ಒಂದು ತಿಂಗಳು ಕಳೆದರೂ ಪತ್ತೆಯಾಗಿಲ್ಲ: ರಘು ಅವರ ಬರುವಿಕೆಗಾಗಿ ಪತ್ನಿ ರುಕ್ಮಿಣಿ ಹಾಗೂ ಇಬ್ಬರು ಮಕ್ಕಳು ಕಾಯುತ್ತಿದ್ದಾರೆ. ಇದರ ಜೊತೆಗೆ ಕೊಡಗಿನಿಂದ ಬಂದು ಕುಕ್ಕೆ ಸುಬ್ರಹ್ಮಣ್ಯ, ನೆಟ್ಟಣ ರೈಲ್ವೆ ಸ್ಟೇಷನ್, ಕಡಬ, ಗುಂಡ್ಯ ಸೇರಿದಂತೆ ಹಲವಾರು ಭಾಗಗಳಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾರೆ.
ವದಂತಿಗಳನ್ನು ನಂಬುವುದೋ,ಬಿಡುವುದೊ : ನಾಪತ್ತೆಯಾದ ವ್ಯಕ್ತಿಯನ್ನು ಹುಡುಕುವ ಸಂದರ್ಭದಲ್ಲಿ ಒಬ್ಬೊಬ್ಬರು ಒಂದೊಂದು ಕಥೆಯನ್ನು ಹೇಳುತ್ತಾರೆ, ವಾರದ ಹಿಂದೆ ನೀಡಿದ್ದೇವೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಸುಬ್ರಹ್ಮಣ್ಯದಲ್ಲಿ ಗಲಾಟೆ ಮಾಡಿದ್ದರು ಅವರನ್ನು ನಾವು ಆಸ್ಪತ್ರೆಗೆ ಕರ್ಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಕೊನೆಗೆ ನೆಟ್ಟಣ್ಣ ರೈಲ್ವೆ ಸ್ಟೇಷನ್ ನಲ್ಲಿ ರೈಲಿಗೆ ಹತ್ತಿಸಿದ್ದೇವೆ ಎಂದು ಹೇಳುತ್ತಿರುವುದಾಗಿದೆ. ಒಂದಷ್ಟು ಜನ ಕುಕ್ಕೆ ಷಣ್ಮುಖ ಭೋಜನ ಶಾಲೆಗೆ ಅನ್ನಪ್ರಸಾದ ಸ್ವೀಕಾರ ಮಾಡಲು ಬರುತ್ತಾರೆ ಎಂಬ ಸುದ್ದಿ ಕುಟುಂಬಸ್ಥರಿಗೆ ದೊರೆತಿದೆ. ಈ ಅಸ್ಪಷ್ಟ ಮಾಹಿತಿಯಿಂದ ಕುಟುಂಬಸ್ಥರು ಗೊಂದಲಕ್ಕೆ ಒಳಗಾಗಿದ್ದಾರೆ.
ಕಾಣೆಯಾದ ವ್ಯಕ್ತಿ ತಮಿಳು, ಮಲಯಾಳಂ, ಕೊಡಗು, ಕನ್ನಡ ಭಾಷೆ ಮಾತಾಡುತ್ತಿದ್ದು ಪತ್ತೆಯಾದಲ್ಲಿ 90358 35236 ಸಂಪರ್ಕಿಸಿ ಮಾಹಿತಿ ನೀಡುವಂತೆ ಕುಟುಂಬದ ಸದಸ್ಯೆ ಸುಮಿತ್ರಾ ಅವರು ಮಾಧ್ಯಮಕ್ಕೆ ವಿನಂತಿಸಿಕೊಂಡಿದ್ದಾರೆ.