




ಕಡಬ: ಜುಲೈ 6ರಂದು ಕಡಬದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅವರಿಂದ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದ್ದು, ಕಡಬ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಇಲಾಖೆಯಿಂದ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಆಗಿದ್ದವರು ಅನೇಕ ಮಂದಿ ಇದ್ದು ಇಂತವರು ಸಭೆಯಲ್ಲಿ ದೂರು ನೀಡಲು ಹಿಂಜರಿಕೆ ಮಾಡಬೇಡಿ ಧೈರ್ಯವಾಗಿ ಸಚಿವರ ಮುಂದೆ ಹೇಳಿಕೊಳ್ಳಬೇಕು, ಒಂದು ವೇಳೆ ಹಿಂಜರಿಕೆ ಇದ್ದರೆ ಕೂಡಲೇ ನನ್ನನ್ನು ಸಂಪರ್ಕಿಸುವಂತೆ ಕಾಂಗ್ರೆಸ್ ಮುಖಂಡ ರೋಯಿ ಅಬ್ರಹಾಂ ವಿನಂತಿಸಿಕೊಂಡಿದ್ದಾರೆ.
![]() |
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವರೋಯಿ ಅಬ್ರಹಾಂ |
ಅವರು ಜು.4ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಡಬ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ಸರ್ವೆ ಇಲಾಖೆಯಲ್ಲಿ ಅಂತೂ ಜನರನ್ನು ದುಡ್ಡಿಗಾಗಿ ರಣಹದ್ದುಗಳಂತೆ ಪೀಡಿಸುತ್ತಿದ್ದಾರೆ, ಇಲ್ಲಿ ಅಧಿಕಾರಿಗಳೇ ಬ್ರೋಕರ್ ಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎನ್ನುವಂತೆ ಕಾಣುತ್ತಿದೆ. ಮುಖ್ಯವಾಗಿ ಪ್ಲಾಟಿಂಗ್ ಸಮಸ್ಯೆ ಇದ್ದು ಸೆಂಟ್ಸ್ ಲೆಕ್ಕದಲ್ಲಿ ಲಕ್ಷಗಟ್ಟಲೆ ಹಣ ಪಡೆಯುತ್ತಿರುವ ಸರ್ವೆ ಇಲಾಖೆಯ ಅಧಿಕಾರಿಗಳು ಇತ್ತ ಜನರ ಕೆಲಸವನ್ನು ಮಾಡದೆ ಅವರ ರಕ್ತ ಹೀರುತ್ತಿದ್ದಾರೆ ಎಂದು ಆರೋಪಿಸಿ ದಲ್ಲಾಳಿಗಳ ಮೂಲಕ ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಜನಸ್ಪಂದನಾ ಸಭೆಗೆ ಬಂದು ದೂರು ನೀಡಿ : ಕಂದಾಯ ಮತ್ತು ಸರ್ವೆ ಇಲಾಖೆ ಮತ್ತು ಇತರ ಯಾವುದೇ ಇಲಾಖೆಯಿಂದ ಸಮಸ್ಯೆಗಳು ಆಗಿದ್ದಲ್ಲಿ ಜನ ಸಾಮಾನ್ಯರು ಯಾವುದೇ ಹಿಂಜರಿಕೆ ಇಲ್ಲದೆ ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರಲ್ಲಿ ದೂರು ನೀಡಬಹುದು. ದೂರು ನೀಡಿ ಮತ್ತೆ ಅಧಿಕಾರಿಗಳು ತೊಂದರೆ ಕೊಡುತ್ತಾರೆ ಎಂಬ ಭಯ ಇದ್ದವರು ನನ್ನನ್ನು (ಮೊಬೈಲ್ 7676993214) ಸಂಪರ್ಕಿಸಿ ನನಗೆ ಯಾವುದೇ ಭಯ ಇಲ್ಲ, ನಾನು ಬಡವರ ಪರ ಹೋರಾಟ ಮಾಡುತ್ತೇನೆ ಎಂದು ರೋಯಿ ಅಬ್ರಹಾಂ ಅವರು ವಿನಂತಿಸಿದ್ದಾರೆ.
ಶಾಸಕರೇ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಗಮನಹರಿಸಿ :ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶ್ರಮಿಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಪಿ. ಮೋಹನ್ ಅವರು ಮಾತನಾಡಿ, ಜನರಿಂದ ಆಯ್ಕೆ ಆಗಿರುವ ಶಾಸಕರೇ ದಯವಿಟ್ಟು ಕಡಬ ಕಂದಾಯ ಮತ್ತು ಸರ್ವೆ ಇಲಾಖೆಯಿಂದ ಜನರಿಗಾಗುವ ತೊಂದರೆ ಬಗ್ಗೆ ಗಮನಹರಿಸಿ, ಜಾತಿ, ಆದಾಯ ಪ್ರಮಾಣ ಪತ್ರದಿಂದ ಪ್ರತಿ ಕೆಲಸಗಳಿಗೂ ಬಡವರು ದಿನಗಟ್ಟಲೆ ಕಾಯುತ್ತಿದ್ದಾರೆ, ಇತ್ತ ಹಣವನ್ನು ನೀಡಿ, ಕೆಲಸವೂ ಇಲ್ಲದೆ ಪರದಾಡುತ್ತಿದ್ದಾರೆ, ಜನಪ್ರತಿನಿಧಿಯಾಗಿ ಅಧಿಕಾರಿಗಳ ಪರ ನಿಲ್ಲದೆ ಜನರ ಪರ ನಿಲ್ಲಬೇಕೆಂದು ಕೆ.ಪಿ.ಮೋಹನ್ ಅವರು ಶಾಸಕರಿಗೆ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪರಿಷತ್ ಸದಸ್ಯ ಸೈಯದ್ ಮೀರಾ ಸಾಹೇಬ್, ಕಾಂಗ್ರೆಸ್ ಮುಖಂಡ, ಕೆ.ಪಿ. ತೋಮಸ್, ಸಾಮಾಜಿಕ ಹೋರಾಟಗಾರ ಸುಜನ್ ವರ್ಗೀಸ್ ಮೊದಲಾದವರು ಉಪಸ್ಥಿತರಿದ್ದರು.