




ಕಡಬ/ಆಲಂಕಾರು: ಮಾಧ್ಯಮ ಜಗತ್ತು ಹಲವು ಬದಲಾವಣೆಗೊಂದಿಗೆ ವೇಗವಾಗಿಯೂ ಜನರನ್ನು ತಲುಪುತ್ತಿದೆ. ನಾವು ಧನಾತ್ಮಕವಾಗಿ ಬಳಕೆಮಾಡಿಕೊಂಡು ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾಗೋಣ ಎಂದು ಪುತ್ತೂರು ಸಹಾಯ ಆಯುಕ್ತ ಜುಬಿನ್ ಮೊಹಾಪಾತ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸೋಮವಾರ
ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ
ಕಾರ್ಯನಿರತ ಪತ್ರಕರ್ತರ ಸಂಘ ಕಡಬ ತಾಲೂಕು ಘಟಕದ ವತಿಯಿಂದ ನಡೆದ
ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಮಾಧ್ಯಮವನ್ನು
ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತೇವೆ ಅದರಂತೆ ಅದರ ಪರಿಣಾಮ ಕಾಣಬಹುದಾಗಿದೆ. ಯಾವುದನ್ನು ನಂಬ ಬೇಕು. ಯಾವುದನ್ನು ನಂಬಬಾರದು ಎನ್ನುವ ತಿಳುವಳಿಕೆ
ಪತ್ರಕರ್ತರಿಗೆ ಇರಬೇಕು. ಸಾರ್ವಜನಿಕರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಗಳ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯುವುದು ಮಾಡಬೇಕು ಎಂದರು. ಪತ್ರಿಕೆಗಳನ್ನು
ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವುದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪ್ರಯೋಜನ ಆಗಲಿದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ
ತಿಳುವಳಿಕೆ ಮೂಡಿಸುವ
ಕಾರ್ಯವಾಗಬೇಕು, ಸಾಮಾಜಿಕ
ಜಾಲತಾಣಗಳನ್ನು ಬಳಸುವವರು ಅಥವಾ ಮಾಧ್ಯಮಗಳಲ್ಲಿ ಘಟನೆಗಳನ್ನು ಪ್ರಕಟಿಸುವವರು, ಘಟನೆಯ ನೈಜತೆಯನ್ನು ಅರಿತು ಪ್ರಕಟಿಸಬೇಕು. ಯಾವುದೇ ಘಟನೆಯ ಮಾಹಿತಿ ತಿಳಿಯದೇ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಸಮಾಜದಲ್ಲಿ ಅಶಾಂತಿ, ಅವಘಡ ಸಂಭವಿಸಲು ಕಾರಣಕರ್ತರಾಗಬಾರದು, ಜವಬ್ದಾರಿ
ಅರಿತು ಮಾಡುವ ಕೆಲಸದಿಂದ ಪತ್ರಿಕೆಗಳು, ಪತ್ರಕರ್ತರು ವಿಶ್ವಾಸ ಉಳಿಸಿಕೊಳ್ಳಬೇಕಿದೆ. ಅಂತಹ
ಕೆಲಸಗಳನ್ನು ಇಲ್ಲಿನ ಪತ್ರಕರ್ತರು ಮಾಡುತ್ತಿದ್ದಾರೆ. ಮಾಧ್ಯಮಗಳು ಆಡಳಿತವನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿದ್ದು, ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ನಮ್ಮ ಕಣ್ತೆರೆಸುವ ಕೆಲಸವೂ ಆಗುತ್ತಿದೆ ಎಂದರು. ಬಳಿಕ ಸಹಾಯಕ ಆಯುಕ್ತರು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.
ವಿಜಯ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಸುಧಾಕರ ಸುವರ್ಣ ತಿಂಗಳಾಡಿ ಉಪನ್ಯಾಸ ನೀಡಿ ಯಾರಿಗೂ ಹೆದರದ ಮತ್ತು ಯಾರ ಕಡೆಗೂ ಒಲವು ಹೊಂದಿರದ ಧೋರಣೆಯನ್ನು ಪತ್ರಕರ್ತ ತನ್ನ ವೃತ್ತಿಯುದ್ದಕ್ಕೂ ಪಾಲನೆ ಮಾಡಿಕೊಂಡು ಹೋಗಬೇಕು. ವ್ಯವಸ್ಥೆಯ ಜತೆಯಲ್ಲಿ ಪತ್ರಕರ್ತ ಸಾಗಿದರೆ ವ್ಯವಸ್ಥೆ ಕುಲಗೆಡುವ ಅಪಾಯವಿದೆ. ಅದರ ಬದಲು ವ್ಯವಸ್ಥೆಯ ಲೋಪವನ್ನು ಹುಡುಕುವ ಕೆಲಸ ನಿರಂತರ ಮಾಡಬೇಕು. ಹಾಗೆ ಮಾಡುವುದರಿಂದ ಪ್ರಜಾಪ್ರಭುತ್ವದ ಆಶಯ ಜೀವಂತವಾಗಿರುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಸಂಚಾಲಕ ದಯಾನಂದ ರೈ ಮನವಳಿಕೆ ಮಾತನಾಡಿ ಎಷ್ಟೇ ಆಧುನಿಕತೆ ಬೆಳೆದರೂ ಮುದ್ರಣ ಮಾಧ್ಯಮ ತನ್ನದೇ ಆದ ಬದ್ದತೆಯನ್ನು ಉಳಿಸಿಕೊಂಡಿದೆ. ದೃಶ್ಯ ಮಾಧ್ಯಗಳು ಹಾಗೂ ಸಾಮಾಜಿಕ ಜಾಲತಾಣಗಳು ಕೂಡಾ ಈ ನಾಡಿನ ಅಭಿವೃದ್ಧಿಯಲ್ಲಿ ತನ್ನೇ ಆದ ಕೊಡುಗೆಯನ್ನು ನೀಡುತ್ತಿವೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಡಬ ತಾಲೂಕು ಅಧ್ಯಕ್ಷ ನಾಗರಾಜ್ ಎನ್.ಕೆ. ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಶುಭ ಹಾರೈಸಿದರು. ಕಾಲೇಜಿನ ಆಡಳಿತಾಧಿಕಾರಿ ಶ್ರೀಪತಿ ರಾವ್, ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಪೆರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವಿತರಕಿ ನಾರಾಯಣಿ ಭಟ್ ಆಲಂಕಾರು ಅವರನ್ನು ಸನ್ಮಾನಿಸಲಾಯಿತು. ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್. ಬಾಲಕೃಷ್ಣ ಕೊಯಿಲ ಸ್ವಾಗತಿಸಿದರು. ಸದಸ್ಯ ಹರೀಶ್ ಬಾರಿಂಜ ಸನ್ಮಾನ ಪತ್ರ ವಾಚಿಸಿದರು. ಸದಸ್ಯ ತಸ್ಲಿಂ ಮರ್ದಾಳ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಾಲೇಜಿನ ಪ್ರಾಂಶುಪಾಲೆ ರೂಪಾ ಎಂ.ಟಿ ವಂದಿಸಿದರು.