




ಕಡಬ: ತೀವ್ರ ಕುತೂಹಲದ ಕೇಂದ್ರ ಬಿಂದು ಆಗಿದ್ದ ಕಡಬ ಪಟ್ಟಣ ಪಂಚಾಯತ್ ಮೀನು ಮಾರಾಟದ ಹಕ್ಕನ್ನು ಜು.20ರಂದು ಏಲಂ ಪ್ರಕ್ರಿಯೆ ನಡೆದಿದೆ . ಭಾರೀ ಪೈಪೋಟಿಯಲ್ಲಿ ಮೂರು ಸ್ಟಾಲ್ ಗಳು ಬರೋಬ್ಬರಿ 24 ಲಕ್ಷಕ್ಕೆ ಏಲಂ ಆಗಿದೆ. ಕನಿಷ್ಠ ಬಿಡ್ಡುಗಳು 2.20 ಲಕ್ಷಕ್ಕೆ ಇದ್ದು ತೀವ್ರ ಪೈಪೋಟಿಯಿಂದ ಗರಿಷ್ಠ ಮೊತ್ತಕ್ಕೆ ಏಲಂ ಆಗಿದೆ.
ಮೊದಲ ನಂಬರಿನ ಸ್ಟಾಲ್ ಫಯಾಜ್ ಕಡಬ ಅವರು 7.50ಲಕ್ಷಕ್ಕೆ , ಎರಡನೇ ನಂಬರಿನ ಸ್ಟಾಲ್ ಜಾಕೀರ್ ಹುಸೈನ್ 10 ಲಕ್ಷಕ್ಕೆ,
ಮೂರನೇ ನಂಬರಿನ ಸ್ಟಾಲ್ ರಿಯಾಜ್ ಮಂಗಳೂರು 6.5 ಲಕ್ಷಕ್ಕೆ ಏಲಂ ಆಗಿದೆ.
ಏಲಂ ಪ್ರಕ್ರಿಯೆಯಲ್ಲಿ ಸುಮಾರು 48 ಮಂದಿ ಭಾಗವಹಿಸಿರುವುದು ಕೂಡ ವಿಶೇಷವಾಗಿತ್ತು.
2 ವರ್ಷಗಳಿಂದ ಏಲಂ ಆಗಿಲ್ಲ: ನಿಯಮ ಉಲ್ಲಂಘನೆ ಆರೋಪ: ಕಳೆದ 2 ವರ್ಷಗಳಿಂದ ಮೀನು ಮಾರಾಟದ ಹಕ್ಕನ್ನು ಏಲಂ ಮಾಡಿರಲಿಲ್ಲ, ಬದಲಾಗಿ ಪಟ್ಟಣ ಪಂಚಾಯತ್ ಈ ಹಿಂದೆ ಮೀನು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಶೇಖಡವಾರು ಹಣ ಹೆಚ್ಚು ಮಾಡಿ ಅವರಿಗೆ ಮುಂದುವರಿಸಿತ್ತು. ಈ ವಿಚಾರವನ್ನು ಆಕ್ಷೇಪಿಸಿ ಮಂಗಳೂರು ಹರೇಕಳ ನಿವಾಸಿ ಜಾಕೀರ್ ಹುಸೈನ್, ರಶೀದ್ ಹಳೆಸ್ಟೇಷನ್, ಮಂಗಳೂರು ಕೊಣಾಜೆಯ ಅಮೀರ್.ಪಿ.ಯವರು ಜಿಲ್ಲಾಧಿಕಾರಿಯವರಿಗೆ ಕಡಬ ಪಟ್ಟಣ ಪಂಚಾಯತ್ ವಿರುದ್ದ ದೂರು ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಯವರು ನಿಯಾಮನುಸಾರ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಜು.20ರಂದು ಏಲಂಗೆ ದಿನ ನಿಗದಿ ಮಾಡಿ ಪ್ರಕಟಣೆ ನೀಡಿತ್ತು.
ಏಲಂ ಪ್ರಕ್ರಿಯೆಯಲ್ಲಿ ಪಂಚಾಯತ್ ಆಡಳಿತಾಧಿಕಾರಿ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಹಾಗೂ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.