




ಸುಳ್ಯ:ಕಾಸರಗೋಡು-ದಕ್ಷಿಣ ಕನ್ನಡ ಗಡಿನಾಡ ಪ್ರದೇಶವಾದ ಜಾಲ್ಸೂರು ಸಮೀಪದ ಪಂಜಿಕಲ್ಲು ಎಂಬ ಗ್ರಾಮದ ಶಾಲಾ ಜಗಲಿಯಲ್ಲಿ ನವಜಾತ ಶಿಶು ಭಾನುವಾರ ಮುಂಜಾನೆ ಪತ್ತೆಯಾಗಿದೆ.
ಶಾಲಾ ಸಮೀಪದಲ್ಲಿ ಮನೆಗಳಿದ್ದು ದಾರಿಯಲ್ಲಿ ಹೋಗುವ ವ್ಯಕ್ತಿಯೊಬ್ಬರಿಗೆ ಮಗು ಅಳುವ ಧ್ವನಿ ಕೇಳಿ ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿದಾಗ ಮಗು ಇರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಎರಡು ತುಂಡು ಬಟ್ಟೆ ಹಾಗು ಮಗುವನ್ನು ಜಗಲಿಯಲ್ಲಿ ಮಲಗಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಮಗು ಹೆಣ್ಣು ಎಂದು ಗುರುತಿಸಲಾಗಿದ್ದು ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅದೂರು ಪೊಲೀಸರು ಪರಿಶೀಲನೆ ನಡೆಸಿ ಮಗುವಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮಗುವನ್ನು ಕರೆದೊಯ್ದಿದ್ದಾರೆ. ಬಳಿಕ ಕಾಸರಗೋಡಿನ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಶಿಶು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.
ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಗುವಿನ ಹೆತ್ತವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜನ್ಮ ನೀಡಿದ ಬಳಿಕ ಶಾಲಾ ಪರಿಸರದಲ್ಲಿ ಮಗುವನ್ನು ಬಿಟ್ಟಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.