


ಕಡಬ ಟೈಮ್ಸ್(KADABA TIMES): ಸಂಪಾದಕೀಯ: ದೇಶದ ವಿವಿಧ ಭಾಗಗಳಲ್ಲಿ ಮಹಿಳೆಯರ, ಬಾಲಕಿಯರ ಮೇಲೆ ದೈಹಿಕ , ಮಾನಸಿಕ ದೌರ್ಜನ್ಯ, ಸರಣಿ ಅತ್ಯಾಚಾರ, ಕೊಲೆಗಳು ನಿರಂತರವಾಗಿ ನಡೆಯುತ್ತಿರುವುದು ದುರ್ದೈವ. ವರದಕ್ಷಿಣೆ, ದ್ವೇಷ, ಪ್ರೀತಿ ಪ್ರೇಮ, ವೈರತ್ವ, ಸೇರಿದಂತೆ ನಾನಾ ಕಾರಣಗಳಿಂದ ಆಸಿಡ್ ದಾಳಿ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಓದುತ್ತಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ಯುವಕನೊಬ್ಬ ಆಸಿಡ್ ಎರಚಿದ್ದಾನೆ.ಇದು ನಾಗರಿಕ, ಸಭ್ಯ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಕಡಬದಲ್ಲಿ ಈ ಆಸಿಡ್ ದಾಳಿ ಎರಡನೆ ಪ್ರಕರಣವಾಗಿದೆ. ನಾಲ್ಕು ವರ್ಷಗಳ ಹಿಂದೆ ಅಂದರೆ 2020ರಲ್ಲಿ ಕೌಟುಂಬಿಕ ಕಾರಣಕ್ಕೆ ಒಂದೇ ಕುಟುಂಬದ ಸದಸ್ಯನಿಂದಲೇ ಭೀಕರ ಆಸಿಡ್ ದಾಳಿ ನಡೆದಿತ್ತು.
ಆಸಿಡ್ ದಾಳಿ ಬಗ್ಗೆ ಯಾರಿಗೂ ಅರಿವಿಲ್ಲ : ಯುವತಿ ಅಥವಾ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಸಿಡ್ ದಾಳಿ ನಡೆದರೆ ನಮ್ಮ ದೇಶದಲ್ಲಿ ಅದಕ್ಕೆ ಕಾನೂನು ರೀತಿ ಕಠಿಣ ಕ್ರಮವಿದೆ. ತಪ್ಪಿಸ್ಥರ ವಿರುದ್ಧ ದೂರು ನೀಡಿದರೆ ಸೂಕ್ತ ಸಾಕ್ಷಿಗಳ ಆಧಾರದಲ್ಲಿ ಕಠಿಣ ಕ್ರಮವನ್ನೂ ಕೈಗೊಳ್ಳಲಾಗುತ್ತದೆ. ಬಹುತೇಕರಿಗೆ ಆಸಿಡ್ ದಾಳಿ ಬಗ್ಗೆ ಯಾರಿಗೂ ಅರಿವಿಲ್ಲ , ಕಡಬದ ಕಾಲೇಜಿನಲ್ಲಿ ನಡೆದ ಈ ದಾಳಿಯೂ ಪ್ರೇಮ ವೈಫಲ್ಯದಿಂದಾಗಿ ನಡೆದಿರುವುದು ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಪಕ್ಕದಲ್ಲಿ ಕುಳಿತ್ತಿದ್ದ ಇಬ್ಬರೂ ಆಕೆಯ ಸ್ನೇಹಿತರಿಗೂ ಗಾಯಗಳಾಗಿವೆ. ದಾಳಿಯೂ ಯುವಕನ ಆಕ್ರೋಶಕ್ಕೆ ಮೂವರು ಯುವತಿಯರು ಆಸಿಡ್ ದಾಳಿಗೆ ಒಳಗಾಗಿರುವುದು ಜೀವನ ಪೂರ್ತಿ ಅರಗಿಸಿಕೊಳ್ಳಲಾಗದ ಮತ್ತು ವಿವರಿಸಲಾಗದ ಸಂಗತಿಯಾಗಿದೆ.
ಈ ಹಿಂದೆ ಆಸಿಡ್ ದಾಳಿ ನಡೆಸಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಇರಲಿಲ್ಲ. ಆದರೆ, ಇಂದು ಆಸಿಡ್ ದಾಳಿ ಮಾಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ನೀಡುವ ಅವಕಾಶ ಕಾನೂನಿನಲ್ಲಿದೆ. ಆದ್ದರಿಂದ ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಸಮಾಜದ ಪ್ರತಿಯೋರ್ವರು ಎಚ್ಚರದಿಂದ ಇರಬೇಕು. ರಬ್ಬರ್ ಗೆ ಬಳಸುವ ಆಸಿಡ್ ರಬ್ಬರ್ ಹಾಲನ್ನು ಸಂಸ್ಕರಿಸಲು ಬಳಕೆಯಾಗುತ್ತಿತ್ತು. ಅದು ಅನ್ಯ ಉದ್ದೇಶಕ್ಕೆ ಬಳಕೆಯಾಗಿದೆ. ಇದು ದುರಂತವಲ್ಲದೆ ಮತ್ತೇನೂ ಅಲ್ಲ, ಇಂಥಹ ಪ್ರವೃತ್ತಿ ನಿಲ್ಲಲಿ.
ಆಸಿಡ್ ದಾಳಿಗೊಳಗಾದ ಯುವತಿ, ಮಹಿಳೆ, ಮಕ್ಕಳಿಗೆ ಸಂಪೂರ್ಣ ಗಾಯಗೊಂಡಿದ್ದರೆ 8 ಲಕ್ಷ ರೂ. ಪರಿಹಾರ, ಶೇ.50ರಷ್ಟು ಗಾಯಗೊಂಡಿದ್ದರೆ 4-5 ಲಕ್ಷ ರೂ., ಶೇ.20ರಷ್ಟು ಇದ್ದರೆ 3-4 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಜೊತೆಗೆ ಆಸಿಡ್ ದಾಳಿ ದಿನದಿಂದ 15 ದಿನದೊಳಗೆ 1 ಲಕ್ಷ ರೂ. ವೈದ್ಯಕೀಯ ವೆಚ್ಚ ನೀಡಲಾಗುತ್ತದೆ .ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನು ಇಲ್ಲಿನ ರಾಜಕೀಯ ಧುರೀಣರು ಸಂಬಂಧಿಸಿದ ಇಲಾಖೆಗೆ ಮನವರಿಕೆ ಮಾಡಿ ಕೂಡಲೇ ಒದಗಿಸುವ ಕೆಲಸ ಮಾಡಬೇಕು.
ನಾನಾ ಕಾರಣಗಳಿಗಾಗಿ ಮಾರಣಾಂತಿಕ ಸ್ವಯಂ ಕೃತ್ಯ ಮಾಡುವ ಮೂಲಕ ಏನು ಸಾಧಿಸಲಾಗದು. ಅದಕ್ಕಾಗಿ ಪೊಲೀಸ್ ಇಲಾಖೆ, ಕೋರ್ಟು ಇತ್ಯಾದಿ ಮಾರ್ಗಗಳು ಇವೆ. ಆಸಿಡ್ ದಾಳಿಗೊಳಗಾದ ಯುವತಿಯರಿಗೆ ಮಾನಸಿಕ, ಭಾವನಾತ್ಮಕ, ಆತ್ಮಸ್ಥೈರ್ಯ ತುಂಬುವ ಮೂಲಕ ಅವರಿಗೆ ನಾವು ಹೊಸ ಬದುಕು ಕಟ್ಟಿಕೊಳ್ಳಲು ಸಮಾಜ ಮುಂದಾಗಬೇಕಿದೆ .ಇಂತಹ ಅವಮಾನವೀಯ ಕೃತ್ಯ ಮುಂದೆಂದೂ ನಡೆಯದಿರಲಿ,ಆಸಿಡ್ ದಾಳಿಯ ಬಗ್ಗೆ ಅರಿವಿರಲಿ.