




ಕಡಬ ಟೈಮ್ಸ್(KADABA TIMES):ಬೆಳ್ಳಾರೆ ಬಿಜೆಪಿ ಯುವ ಮುಖಂಡನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಪೊಲೀಸರು ನಿನ್ನೆ ಇಬ್ಬರನ್ನು ಬಂಧಿಸಿದ್ದು , ಇಂದು ಅವರನ್ನು ಸುಳ್ಯ ಪಿಎಫ್ಐ ಕಚೇರಿಗೆ ಕರೆದುಕೊಂಡು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಸುಳ್ಯ ಪೊಲೀಸರು ಮಹಜರು ಪ್ರಕ್ರಿಯೆ ನಡೆಸುತ್ತಿದ್ದು ಆರೋಪಿಗಳನ್ನು ಸುಳ್ಯದ ಗಾಂಧಿನಗರದ ಅಲೆಟ್ಟಿ ರಸ್ತೆಯಲ್ಲಿರುವ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಬಂಧಿತರಾಗಿದ್ದ ಅಬೀದ್ ಮತ್ತು ನೌಫಾಲ್ ಅವರನ್ನು ಸುಳ್ಯದ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ ಕಛೇರಿಯಲ್ಲಿ ಮಹಜರು ಪ್ರಕ್ರಿಯೆಗೆ ಒಳಪಡಿಸುತ್ತಿರುವ ಮಾಹಿತಿಯನ್ನು ಎಡಿಜಿಪಿ ಅಲೋಕ್ ಕುಮಾರ್ ಪಡೆಯುತ್ತಿದ್ದಾರೆ ಎನ್ನಲಾಗಿದೆ .
ಪಿಎಫೈ ಕಛೇರಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತು ನಿಯೋಜಿಸಲಾಗಿದೆ .ಸುತ್ತ ನೂರಾರು ಸಂಖ್ಯೆಯಲ್ಲಿ ಕುತೂಹಲಿಗಳು ನೆರೆದಿದ್ದಾರೆ. ಬಂಧಿತ ಆರೋಪಿಗಳಿಬ್ಬರು ಹತ್ಯೆಯಾದ ಪ್ರವೀಣ್ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಹಾಗೂ ಹತ್ಯೆಯ ಯೋಜನೆ ರೂಪಿಸುತ್ತಿದ್ದ ತಂಡದ ಭಾಗವಾಗಿದ್ದರು ಎನ್ನಲಾಗುತ್ತಿದೆ .

ಇವರೆಗೆ ಈ ಪ್ರಕರಣದಲ್ಲಿ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿತ್ತು.ಈ ಪ್ರಕರಣದಡಿ ಈ ಇಬ್ಬರು ಆರೋಪಿಗಳ ಹೊರತುಪಡಿಸಿ ಇನ್ನು ನಾಲ್ವರನ್ನು ಬಂಧಿಸಲಾಗಿದೆ. ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಬೆಳ್ಳಾರೆ ಸಮೀಪದ ಪಳ್ಳಿಮಜಲ್ ನಿವಾಸಿಗಳಾದ ಸದ್ದಾಂ ಹಾಗೂ ಹ್ಯಾರೀಸ್ ಇತರೆ ಬಂಧಿತರು. ಸದ್ಯ ನಾಲ್ವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ನಾಲ್ವರನ್ನು ಕೂಡ ಹಂತಕರಿಗೆ ಹತ್ಯೆಯ ಮೊದಲು ಹಾಗೂ ಹತ್ಯೆಯ ಬಳಿಕ ನೆರವು ನೀಡಿ ಆರೋಪದಡಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ಎಲ್ಲ ಆರೋಪಿಗಳ ವಿರುದ್ದ ಕಠಿನ ಯುಎಪಿಎ ಕಾಯ್ದೆಯ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಲಾಗಿದ್ದು, ಇದರಲ್ಲಿ ಜಾಮೀನು ಪಡೆಯುವುದು ದುಸ್ತರ ಎನ್ನಲಾಗುತ್ತಿದೆ .