




ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ/ಕಡಬ: ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿರುವ ಸುಬ್ರಹ್ಮಣ್ಯ ಸಮೀಪದ ಕಲ್ಮಕ್ಕಾರು ಕೊಲ್ಲಮೊಗ್ರು ಭಾಗದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿದ್ದಾರೆ.
ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಯುವಕರು ತಮ್ಮ ಸ್ವಂತ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಸ್ವಯಂ ಸೇವಕರಾಗಿ ಶ್ರಮಪಡುತ್ತಿದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿರುವಂತೆಯೇ ಭಾರೀ ಮಳೆಗೆ ಮೇಲಿನ ಭಾಗದಿಂದ ಅನಿರೀಕ್ಷಿತವಾಗಿ ಹರಿದು ಬಂದಿದೆ. ನೆರೆನೀರಿಗೆ ಕಲ್ಮಕ್ಕಾರು ಕೊಲ್ಲಮೊಗರು ರಸ್ತೆಯಲ್ಲಿ ಆಳೆತ್ತರದಲ್ಲಿ ನೀರು ಉಕ್ಕಿಬಂದ ಪರಿಣಾಮ ಗಂಟೆಗಳಷ್ಟು ಕಾಲ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಕಾರ್ಯಕರ್ತರು ದಿಗ್ಭಂಧನಕ್ಕೊಳಗಾದ ಘಟನೆಯೂ ನಡೆದಿದೆ.

ಕಾರ್ಯಕರ್ತರು ನೆರೆನೀರು ಸ್ವಲ್ಪ ತಗ್ಗುತ್ತಿದ್ದಂತೆ ರಸ್ತೆಯ ಎರಡು ಬದಿಗೆ ರಕ್ಷಣಾ ಬೇಲಿಯಾಗಿ ನಿಂತು ಒಂದು ಬದಿಯಿಂದ ಇನ್ನೊಂದು ಬದಿಗೆ ವಾಹನ ಹಾಗೂ ಜನರನ್ನು ದಾಟಿಸುವಲ್ಲಿ ಯಶಸ್ವಿಯಾದರು. ಕಲ್ಮಕ್ಕಾರಿನಲ್ಲಿ ಮೇಘಸ್ಪೋಟದಿಂದಾಗಿ ಭಾರಿ ಗಾತ್ರದ ಮರಗಳ ಸಹಿತ ಹರಿದು ಬಂದಿರುವ ನೀರಿನ ರಭಸಕ್ಕೆ ಸೇತುವೆಯ ಇನ್ನೊಂದು ಬದಿಯ ತೆಂಗಿನ ತೋಟ ಕೊಚ್ಚಿಹೋಗಿ ಹೊಸದಾಗಿ ತೋಡು ನಿರ್ಮಾಣವಾಗಿತ್ತು. ಆ ಪ್ರದೇಶಕ್ಕೆ ತಾತ್ಕಾಲಿಕ ಕಂಗಿನ ಪಾಲ ನಿರ್ಮಿಸಿ ಸದ್ಯದ ಮಟ್ಟಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಶ್ರಮದಾನ ಕಾರ್ಯದಲ್ಲಿ ಸೇವಾ ಭಾರತಿ, ವಿಶ್ವಹಿಂದೂ ಪರಿಷತ್ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ ಹಾಗೂ ವೀರಕೇಸರಿ ಮಿತ್ರವೃಂದ ಮಂಡೆಕೋಲು ಭಾಗದ ಸಂಘಟನೆಯ ಸದಸ್ಯರು ಸೇರಿಕೊಂಡಿದ್ದಾರೆ. ಹಿಂದೂ ಸಂಘಟನೆಗಳ ಪ್ರಮುಖರಾದ ಮಹೇಶ್ ಕುಮಾರ್ ರೈ ಮೇನಾಲ, ಸುರೇಶ್ ಕಣೆಮರಡ್ಕ, ರಾಜೇಶ್ ಕಿರಿಭಾಗ, ಶಿವಪ್ರಸಾದ್ ಉಗ್ರಾಣಿಮನೆ ಹಾಗೂ ಮತ್ತಿತರರು ನೇತೃತ್ವ ವಹಿಸಿದ್ದರು.