




ಕಡಬ ಟೈಮ್ಸ್(KADABA TIMES): ಸುಳ್ಯ: ಸಾಮಾನ್ಯವಾಗಿ ಮಸೀದಿಯ ಧ್ವನಿವರ್ಧಕವನ್ನು ಬಾಂಗ್ (ಆಝಾನ್)ಗೆ ಮಾತ್ರ ಬಳಸುವುದನ್ನು ನಾವು ಗಮನಿಸಿದ್ದೇವೆ.ಆದರೆ ತುರ್ತು ಸಂದರ್ಭದಲ್ಲಿ ಮಸೀದಿಯ ಧ್ವನಿವರ್ಧಕದ ಮೂಲಕ ಗ್ರಾಮದ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿ ಮಸೀದಿಯೊಂದು ಸುದ್ದಿಯಾಗಿದೆ.
ಆಗಸ್ಟ್ ೨ ರಂದು ರಾತ್ರಿ ಪೇರಡ್ಕ ಸುತ್ತಮುತ್ತಲಿನ ಮನೆಯವರು ಸುರಕ್ಷಿತ ವಾಗಿರಲು ಮಸೀದಿಯ ಧ್ವನಿವರ್ಧಕದ ಮೂಲಕ ಮಸೀದಿ ಖತೀಬರಾದ ರಿಯಾಝ್ ಫೈಝಿ ಮಧ್ಯರಾತ್ರಿ ಎಚ್ಚರಿಸಿದ್ದಾರೆ. ಬಿರುಸಿನ ಮಳೆಯಿಂದ ನೀರಿನ ಮಟ್ಟ ಹೆಚ್ಚಾಗುತ್ತಾ ಇರುವುದನ್ನು ಗಮನಿಸಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಧ್ವನಿವರ್ಧಕ ಮೂಲಕ ಮಾಹಿತಿ ನೀಡಿದ ಕೆಲವೇ ಕ್ಷಣದಲ್ಲಿ ಗೂನಡ್ಕ ಪರಿಸರದಲ್ಲಿ ಮನೆಗೆ ಮತ್ತು ಪೇರಡ್ಕ ದರ್ಗಾ ಶರೀಫ್ ಹತ್ತಿರದ ಮನೆಗಳಿಗೆ ನೀರು ನುಗ್ಗಲು ಆರಂಭವಾಗಿದ್ದು ಕೂಡಲೇ ಪರಿಸರದ ಜನರು ಎಚ್ಚೆತ್ತುಕೊಂಡು ಜನರ ರಕ್ಷಣೆಗೆ ಧಾವಿಸಿದ್ದಾರೆ.ಇದರ ಜೊತೆಗೆ ಸುಳ್ಯ ಅಗ್ನಿ ಶಾಮಕದಳ ವಿವಿಧ ಸಂಘ ಸಂಸ್ಥೆಯ ಕಾರ್ಯಕರ್ತರು ನೆರವಾಗಲು ಸಹಕರಿಸಿದ್ದಾರೆ.