




ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ/ಸುಳ್ಯ: ಹಲವು ಸಮಯಗಳಿಂದ ನೆಮ್ಮದಿಯಿಂದ ಇದ್ದ ಜನರಿಗೆ ಭೂಮಿ ಕಂಪಿಸಿದ ಅನುಭವ ಆಗುವುದರೊಂದಿಗೆ ಮತ್ತೆ ಸುಳ್ಯ ಪರಿಸರದ ಜನರು ಆತಂಕಗೊಂಡಿದ್ದಾರೆ.
ಸುಬ್ರಹ್ಮಣ್ಯ ಸಮೀಪದ ಕಲ್ಮಕಾರು ಹಾಗೂ ಸುಳ್ಯದ ಕಲ್ಲುಗುಂಡಿ ಪರಿಸರದಲ್ಲಿ ರವಿವಾರ ಸಂಜೆ ವೇಳೆ ಭೂಮಿ ಕಂಪಿಸಿದ ಬಗ್ಗೆ ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ.
ಕಲ್ಮಕಾರು ಪರಿಸರದಲ್ಲಿ ಸಂಜೆ 6.30ರ ಸುಮಾರಿಗೆ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ. ತಾಲೂಕಿನ ಕಲ್ಮಕಾರು, ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಕಂಪನ ಅನುಭವವಾಗಿದೆ. ಶಬ್ದವು ಕೊಲ್ಲಮೊಗ್ರದ ವರೆಗೆ ಕೇಳಿಸಿರುವುದಾಗಿ ತಿಳಿದು ಬಂದಿದೆ.

ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳ ಪಾರೆಯಲ್ಲೂ ಭೂಮಿ ಕಂಪಿಸಿದ್ದು, ಕೆಲವು ಸೆಕೆಂಡ್ ದೊಡ್ಡ ಶಬ್ದ ಕೇಳಿಸಿದೆ. ಸಣ್ಣ ಮಟ್ಟಿನ ಕಂಪನದ ಅನುಭವ ಆಗಿದೆ.
ಆಗಸ್ಟ್ ಮೊದಲ ದಿನ ಸುರಿದ ಬಾರೀ ಮಳೆಗೆ ಭೂಕುಸಿತ ಸಂಭವಿಸಿ ಕಲ್ಮಕಾರು, ಕಲ್ಲುಗುಂಡಿ ವ್ಯಾಪ್ತಿಯಲ್ಲಿ ಭಾರೀ ಹಾನಿ, ಜಲಾವೃತ ಸಂಭವಿಸಿ ಅಪಾರ ನಷ್ಟ ಉಂಟಾಗಿತ್ತು. ಜನರು ಇವುಗಳಿಂದ ಅಲ್ಪ ನೆಮ್ಮದಿಗೆ ಬರುವ ವೇಳೆ ಇದೀಗ ಭೂಮಿ ಕಂಪಿಸಿರುವುದು ಜನತೆಯಲ್ಲಿ ಮತ್ತೆ ಆತಂಕ ತಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಸುಳ್ಯ ತಾಲೂಕಿನ ಕೆಲವೆಡೆ ಭೂಮಿ ಏಳೆಂಟು ಬಾರಿ ಕಂಪಿಸಿತ್ತು. ಚೆಂಬು, ಅರಂತೋಡು ಕಂಪನದ ಕೇಂದ್ರದ ಬಿಂದುವಾಗಿತ್ತು. ಸಂಪಾಜೆ ವ್ಯಾಪ್ತಿಯ ಕೆಲವು ಮನೆಗಳಲ್ಲಿ ಬಿರುಕು ಮೂಡಿತ್ತು.