




ಕಡಬ ತಾಲೂಕಿನ ಕೊಯಿಲ ಗ್ರಾಮದ ಮರ್ವದಗುರಿ ಎಂಬಲ್ಲಿ ಬಡ ಕುಟುಂಬದ ಮಹಿಳೆಯೋರ್ವರಿಗೆ ಕೊಯಿಲ ಶಾಖೆಪುರದ ಸಂಜೀವಿನಿ ಮಿತ್ರವೃಂದ ಹಾಗೂ ಶಾಖೆಪುರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ ನಿರ್ಮಿಸಿಕೊಟ್ಟ ನೂತನ ಮನೆ ನಿರ್ಮಿಸಿಕೊಟ್ಟಿದೆ.
ವಾಸಿಸಲು ಸರಿಯಾದ ಸೂರು ಇಲ್ಲದೆ ಹಲವಾರು ವರ್ಷಗಳಿಂದ ಟರ್ಪಾಲು ಹಾಕಿದ ಗುಡಿಸಲಿನಲ್ಲಿ ಕೊಯಿಲದ ಲಲಿತಾ ಅವರು ಅಂಗವಿಕಲ ಪತಿ ತನಿಯ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು. ತನಿಯ ಅವರು ಇತ್ತೀಚೆಗೆ ನಿಧನ ಹೊಂದಿದರು. ಜೀವನ ಸಾಗಿಸಲು ಪರದಾಟ ನಡೆಸುವ ಪರಿಸ್ಥಿತಿ ಈ ಕುಟುಂಬದಾಗಿತ್ತು.
ಈ ಹಿನ್ನೆಲೆಯಲ್ಲಿ ಶಾಖೆಪುರ ಸಂಜೀವಿನಿ ಮಿತ್ರವೃಂದದ ಸದಸ್ಯರು ಬಡ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಮುಂದಾದರು. ದಾನಿಗಳನ್ನು ಸಂಪರ್ಕಿಸಿ ಅವರ ಮೂಲಕ ಮನೆಗೆ ಬೇಕಾದ ಸಾಮಾಗ್ರಿಗಳನ್ನು ತರಿಸಿಕೊಂಡು ಒಂದು ವರ್ಷದೊಳಗೆ ಸುಮಾರು 3 ಲಕ್ಷ ರೂ.,ವೆಚ್ಚದಲ್ಲಿ ಸುಂದರ ಮನೆ ನಿರ್ಮಾಣ ಮಾಡಲಾಗಿದೆ. ಆ.20ರಂದು ನೂತನ ಮನೆಯಲ್ಲಿ ಬೆಳಿಗ್ಗೆ ಗಣಹೋಮ, ಗೃಹಪ್ರವೇಶ ನಡೆಯಿತು.
ಬಡ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿರುವ ಶಾಖೆಪುರ ಸಂಜೀವಿನಿ ಮಿತ್ರವೃಂದದ ಯುವಕರ ತಂಡದ ಮಾದರಿ ಕೆಲಸ ಗ್ರಾಮಸ್ಥರ ಶ್ಲಾಘನೆಗೆ ಪಾತ್ರವಾಗಿದೆ.