




ಕಡಬ ಟೈಮ್ಸ್(KADABA TIMES):ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ತಹಶಿಲ್ದಾರ್ ಮತ್ತು ಆಹಾರ ನಿರೀಕ್ಷಕರು ಜಂಟಿಯಾಗಿ ದಾಳಿ ನಡೆಸಿ ಅಕ್ಕಿ ದಾಸ್ತಾನು ವಶಪಡಿಸಿಕೊಂಡ ಘಟನೆ ಸೊಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ಜು.29ರಂದು ನಡೆದಿದೆ.
ಪಣಕಜೆ ಗೋವಿಂದ ಸದನದ ಮನೆಯ ಪಕ್ಕದಲ್ಲಿರುವ ಗೋಡೌನ್ ಮೇಲೆ ತಹಶಿಲ್ದಾರ್ ಪೃಥ್ವಿ ಸಾನಿಕಂ ಮತ್ತು ಆಹಾರ ನಿರೀಕ್ಷಕ ವಿಶ್ವ ಕೆ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ದ್ದಾರೆ. ಈ ವೇಳೆ 11.5 ಕ್ವಿಂಟಲ್ ಪಡಿತರ ಅಕ್ಕಿ ಮತ್ತು ಅಶೋಕ್ ಗೂಡ್ಸ್ ವಾಹನದಲ್ಲಿ ತುಂಬಿಸಿಟ್ಟ 23 ಕ್ವಿಂಟಲ್ ಅಕ್ಕಿಪತ್ತೆಯಾಗಿದ್ದು ಅಧಿಕಾರಿಗಳು ಅಕ್ರಮ ದಾಸ್ತಾನನ್ನು ವಶಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಆಹಾರ ನಿರೀಕ್ಷಕ ವಿಶ್ವ ಕೆ ದೂರು ನೀಡಿದ್ದಾರೆ. ಅಕ್ಕಿ ಯಾರಿಗೆ ಸೇರಿದ್ದು, ಎಲ್ಲಿಗೆ ಸಾಗಾಟ ಮಾಡುತ್ತಿದ್ದರೆಂಬ ಬಗ್ಗೆ ತನಿಖೆ ಮುಂದುವರಿದಿದೆ.