




ಕಡಬ ಟೈಮ್ಸ್(KADABA TIMES):ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಅಪರಾಧ ಕ್ರಮಾಂಕ 63/2022ರಂತೆ 302 ಜೊತೆಗೆ 34 ಐಪಿಸಿ ಅನ್ವಯ ಕೇಸು ದಾಖಲಾಗಿದೆ.
ಜುಲೈ 26ರಂದು ರಾತ್ರಿ 8.30ಕ್ಕೆ ಬೆಳ್ಳಾರೆ ಗ್ರಾಮದ ಮಾಸ್ತಿಕಟ್ಟೆ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಬಳಿ ಕೊಲೆ ಕೃತ್ಯ ನಡೆದಿದ್ದು, ಕೆಯ್ಯೂರು ಮಾಡಾವು ಸಂತೋಷ್ ನಗರದ ಮಧು ಕುಮಾರ್ ರಾಯನ್ (34ವ) ನೀಡಿದ ದೂರಿನಂತೆ ಮೂರು ಜನ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೇಸು ದಾಖಲಾಗಿದೆ.
ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ನಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಮಧುಕುಮಾರ್ ರಾಯನ್ ಅವರು ನೀಡಿದ ದೂರಿನಲ್ಲಿ ‘ಚಿಕನ್ ಸೆಂಟರ್ ಮಾಲಕ ಪ್ರವೀಣ್ ನೆಟ್ಟಾರು ಅವರು ವ್ಯಾಪಾರ ಮುಗಿಸಿ ಅಂಗಡಿ ಬಾಗಿಲು ಹಾಕಿ ತನ್ನ ಮನೆಯ ಕಡೆಗೆ ಹೋಗಲು ಸ್ಕೂಟರಿನಲ್ಲಿ ಕುಳಿತು ಹೊರಡಲು ಸಿದ್ಧತೆಯಲ್ಲಿದ್ದರು.

ತಾನು ಅಂಗಡಿಯ ಒಳಗೆ ರೈನ್ ಕೋರ್ಟ್ ತರಲೆಂದು ಹೋದ ಸಮಯ ಅಂಗಡಿಯ ಹೊರಗೆ ಜೋರಾಗಿ ಬೊಬ್ಬೆ ಕೇಳಿ ಹೊರಗಡೆ ಬಂದು ನೋಡುವಷ್ಟರಲ್ಲಿ ಪ್ರವೀಣ್ ಸ್ಕೂಟರ್ ನಿಂತಿದ್ದ ಸ್ಥಳದಿಂದ ಸುಮಾರು 50 ಅಡಿ ದೂರದಲ್ಲಿ ಕವಚಿ ಬಿದ್ದಿದ್ದು ಆಗ ಅಲ್ಲಿಂದ ಮೂರು ಜನ ಅಪರಿಚಿತ ವ್ಯಕ್ತಿಗಳು ಕೈಯಲ್ಲಿ ಹತ್ಯಾರುಗಳನ್ನು ಹಿಡಿದುಕೊಂಡು ಮೋಟಾರು ಸೈಕಲ್ಲಿನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದಾರೆ.
ನೆಲದಲ್ಲಿ ಬಿದ್ದಿದ್ದ ಪ್ರವೀಣ್ ಅವರನ್ನು ನೋಡಿದಾಗ ಅವರ ಕುತ್ತಿಗೆಯ ಮತ್ತು ತಲೆಯ ಭಾಗದಲ್ಲಿ ಗಾಯವಾಗಿದ್ದು ರಕ್ತಸ್ರಾವ ಆಗುತ್ತಿದ್ದು ಸ್ಥಳಕ್ಕೆ ಅಂಬ್ಯುಲೆನ್ಸ್ ಬರ ಹೇಳಿ ಗಾಯಾಳುವನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರವೀಣ್ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಕೇಸು ದಾಖಲಾಗಿದೆ.