




ಕಡಬ ಟೈಮ್ಸ್(KADABA TIMES):ಸುಳ್ಯ/ಬೆಳ್ಳಾರೆ:ಪರಿಚಯದ ಇಬ್ಬರು ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ಬಳಿಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಕರೆಸಿಕೊಂಡ ತಂಡ ಮುಸ್ಲಿಂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬೆಳ್ಳಾರೆಯ ಕಳಂಜ ಎಂಬಲ್ಲಿ ಕಳೆದ ರಾತ್ರಿ ನಡೆದಿದೆ.
ಮಾರಣಾಂತಿಕ ಹಲ್ಲೆಯಿಂದ ಗಂಭೀರ ಗಾಯಗೊಂಡ ಮುಸ್ಲಿಂ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ರುವುದಾಗಿದ್ದು ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಕಳೆಂಜದ ನಿವಾಸಿಗಳಿಬ್ಬರ ನಡುವೆ ಕಳೆದ ರಾತ್ರಿ ಅಂಗಡಿಯೊಂದರ ಬಳಿ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿದೆ. ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದು ಹಿಂದೂ ಯುವಕನ ಹಣೆ ಭಾಗಕ್ಕೆ ಏಟಾಗಿತ್ತು ಎನ್ನಲಾಗಿದೆ.
ಇದಾದ ಬಳಿಕ ಹಿಂದೂ ಯುವಕ ಮತ್ತು ಆತನ ಸ್ನೇಹಿತರು, ಮುಸ್ಲಿಂ ಯುವಕನಿಗೆ ಕರೆಮಾಡಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸೋಣವೆಂದ ಹಿನ್ನೆಲೆಯಲ್ಲಿ ಯುವಕ ಮತ್ತು ಆತನ ಸ್ನೇಹಿತ ಬೈಕ್ ನಲ್ಲಿ ತಂಡ ಕರೆದ ಸ್ಥಳಕ್ಕೆ ತೆರಳಿದ್ದಾರೆ. ತಕ್ಷಣ ಅಲ್ಲಿ ಅಡಗಿ ಕುಳಿತಿದ್ದ ತಂಡ ಏಕಾಏಕಿ ದೊಣ್ಣೆ, ರಾಡ್ ,ಸೋಡಾ ಬಾಟಲಿಯಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಪೊಲೀಸರು ಕೂಡ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥ ಪಡಿಸಲು ಹೇಳಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ತಲೆಗೆ ತೀವ್ರ ಹಲ್ಲೆಗೊಳಗಾಗಿ ಯುವಕ ಮನೆಯೊಂದರ ಬಾವಿಯ ಬಳಿ ಪ್ರಜ್ಞಾಹೀನನಾಗಿ ಬಿದ್ದಿರುವುದು ಕಂಡುಬಂದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ ಕೂಡ ಆಗಿದೆ. ತಕ್ಷಣ ಆತನನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ರಾತ್ರಿಯೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.