




ಕಡಬ ಟೈಮ್ಸ್(KADABA TIMES):ಕಡಬ/ಪುತ್ತೂರು:ಕೃಷಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಆಲಂಕಾರಿನ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರು ಉತ್ತರ ಭಾರತಕ್ಕೆ ಮೋಜಿನ ಟೂರ್ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಪುತ್ತೂರು ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೋಲ್ಪೆ ಆರೋಪ ಮಾಡಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಬ ತಾಲೂಕಿನ ಅಲಂಕಾರು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗು ಆಡಳಿತ ಮಂಡಳಿಯ ಸದಸ್ಯರು ಇತ್ತೀಚೆಗೆ ಸಹಕಾರಿ ಸಂಘದ ಹಣದಲ್ಲಿ ಉತ್ತರ ಭಾರತಕ್ಕೆ ಅಧ್ಯಯನ ಪ್ರವಾಸ ಹೋಗಿದ್ದಾರೆ. ಆದರೆ ಪ್ರವಾಸಕ್ಕೆ ಸಹಕಾರಿ ಸಂಘದ ಸದಸ್ಯರಲ್ಲದೆ, ಅವರ ಕುಟುಂಬದ ಸದಸ್ಯರನ್ನೂ ಕರೆದೊಯ್ದಿದ್ದರು.

ಸೊಸೈಟಿ ದುಡ್ಡಿನಲ್ಲಿ ಪತಿ- ಪತ್ನಿಯರು ಮೋಜು ನಡೆಸಿ ಬಂದಿದ್ದಾರೆ. ಅದರ ಫೋಟೊಗಳು ಕೂಡ ವೈರಲ್ ಆಗಿವೆ ಎಂದು ಹೇಳಿದ್ದಾರೆ. ಪ್ರವಾಸದ ಹೆಸರಿನಲ್ಲಿ ಉತ್ತರ ಭಾರತದ ಪುಣ್ಯಕ್ಷೇತ್ರ ಹಾಗೂ ಪ್ರವಾಸಿ ತಾಣಗಳನ್ನು ಸುತ್ತಾಡಿದ್ದು ಬಿಟ್ಟರೆ ಕೃಷಿಗೆ ಸಂಬಂಧಪಟ್ಟ ಯಾವುದೇ ಅಧ್ಯಯನವನ್ನು ನಡೆಸಿಲ್ಲ. ಕೃಷಿಕರ ದುಡ್ಡಿನಲ್ಲಿ ನಡೆಯುತ್ತಿರುವ ಸಹಕಾರಿ ಸಂಘ. ಆದರೆ ಇವರು ಕುತುಬ್ ಮಿನಾರ್ ಇನ್ನಿತರ ಪ್ರವಾಸಿ ತಾಣಗಳಿಗೆ ಹೋಗಿದ್ದಾರೆ. ಇವರ ಮೋಜಿನ ಪ್ರವಾಸಕ್ಕೆ ಸೊಸೈಟಿ ದುಡ್ಡನ್ನು ಹೇಗೆ ಬಳಸಿದ್ದಾರೆ ಎನ್ನುವ ಬಗ್ಗೆ ಕೃಷಿಕರು ಕೇಳುತ್ತಿದ್ದಾರೆ. ಒಂದು ವ್ಯವಸ್ಥೆಯನ್ನು ಹಾಳು ಗೆಡವುತ್ತಿರುವುದರ ಪ್ರತೀಕ ಈ ರೀತಿಯ ಮೋಜಿನ ಪ್ರವಾಸ. ಕೃಷಿಕರ ದುಡ್ಡನ್ನು ಪೋಲು ಮಾಡುತ್ತಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಆಪ್ ಪದಾಧಿಕಾರಿಗಳಾದ ಜನಾರ್ಧನ ಬಂಗೇರ, ಡಾ ವಿಷುಕುಮಾರ್ ಇದ್ದರು.