




ಕಡಬ ಟೈಮ್ಸ್(KADABA TIMES):ಸುಬ್ರಹ್ಮಣ್ಯ/ಹಾಸನ/ ಸಕಲೇಶಪುರ :ಕಡಬ ತಾಲೂಕಿನ ಸುಬ್ರಹ್ಮಣ್ಯದಿಂದ 30ಕಿಮೀ ದೂರದಲ್ಲಿರುವ ,ಹಾಸನ ಜಿಲ್ಲಾ ಕೇಂದ್ರದಿಂದ 80 ಕಿ.ಮೀ ದೂರದಲ್ಲಿರುವ ಬಿಸಿಲೆಯ ಪಟ್ಲ ಬೆಟ್ಟಕ್ಕೆ ಪ್ರವಾಸಿಗರ ದೋಚಲು ಭಾರಿ ದೊಡ್ಡ ದಂಧೆ ನಡೆಯುತ್ತಿದೆ.
ಅರಣ್ಯ ಇಲಾಖೆ ಪ್ರಕಾರ ಪಟ್ಲ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿದೆ. ಆದರೆ ಅಲ್ಲಿ ಒಬ್ಬನೇ ಒಬ್ಬ ಅರಣ್ಯ ಇಲಾಖೆ ಸಿಬ್ಬಂದಿಯೂ ಇಲ್ಲದಿರುವುದು ವಿಪರ್ಯಾಸ. ಇಲ್ಲಿ ಸುಮಾರು 3 ವರ್ಷಗಳಿಂದ ಈಚೆಗೆ ಈ ಬೆಟ್ಟದಲ್ಲಿ ಈಗೀಗ ಬಾರಿ ದೊಡ್ಡ ದಂಧೆಯಗಿ ಬದಲಾಗಿದೆ.
ಖಾಸಗಿ ಪಿಕಪ್ ನಲ್ಲಿ ಬಾಡಿಗೆ: ಬಿಳಿ ಬೋರ್ಡ್ ನ ಖಾಸಗಿ ಪಿಕಪ್ ಗಳನ್ನು ಹೊಂದಿರುವ ವಾಹನ ಮಾಲಿಕರು ಬೆಟ್ಟಕ್ಕೆ ಖಾಸಗಿ ವಾಹನಗಳ ಮೂಲಕ ಸಂಚರಿಸಲು ಅವಕಾಶ ನೀಡುತ್ತಿಲ್ಲ. ತಮ್ಮ ಖಾಸಗಿ ಬಿಳಿ ನಂಬರ್ ಪ್ಲೇಟ್ ಹೊಂದಿರುವ ಪಿಕಪ್ ನಲ್ಲೇ ಬಾಡಿಗೆ ನಡೆಸಿ ಮತ್ತು ಅಪಾಯಕಾರಿ ರೀತಿ ಜನರನ್ನು ತುಂಬಿಸಿ ಕಾನೂನು ಉಲ್ಲಂಘಿಸಿದರೂ ಸಂಬಂಧಪಟ್ಟ ಇಲಾಖೆ ಮೌನವಾಗಿರುವುದೇ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಗೂಡ್ಸ್ ವಾಹನದಲ್ಲಿ ಪ್ರವಾಸಿಗರನ್ನು ಸಾಗಿಸಿ ಏನಾದರು ಅವಘಡ ಸಂಭವಿಸಿದರೆ ಇನ್ಸೂರೆನ್ಸ್ ಕ್ಲೈಮ್ ಆಗುವುದಿಲ್ಲ. ಇಷ್ಟು ವರ್ಷದಿಂದ ಪ್ರವಾಸಿಗರನ್ನು ಸಾಗಿಸಿದರೂ ಆರ್ ಟಿ ಓ ಯಾಕೆ ಮೌನವಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಲೋಲಾಕ್ಷ ಪ್ರಶ್ನಿಸುತಿದ್ದಾರೆ.
2 ಕಿಮೀ ಗೆ ಸಾವಿರಾರು ರೂಪಾಯಿ: ಒಂದು ವೇಳೆ ಖಾಸಗಿ ವಾಹನಗಳ ಮೂಲಕ ಸಂಚರಿಸಿದರೇ ಏನೇನೋ ನೆಪವೊಡ್ಡಿ ಜಗಳಕ್ಕೆ ಬರುತ್ತಾರೆ ಮತ್ತು ಹಲ್ಲೆಗೆ ಮುಂದಾಗುತ್ತಾರೆ. ಕೇವಲ 2 ಕಿಮೀ ಗೆ ಒಬ್ಬೊಬ್ಬ ಪ್ರವಾಸಿಗರತ್ರ ಸಾವಿರಾರು ರೂಪಾಯಿ ತೆಗೆದುಕೊಂಡು ಪಿಕಪ್ ನಲ್ಲಿ ಅಪಾಯಕಾರಿ ರೀತಿ ತುಂಬಿಸಿಕೊಂಡು ದೂರದ ಬೆಟ್ಟ ವೀಕ್ಷಣೆಗೆ ಕರೆದುಕೊಂಡು ಹೋಗುತ್ತಾರೆ. ಬೆಟ್ಟದ ರಸ್ತೆಯು ಬಾರಿ ಅಪಾಯಕಾರಿ ಸ್ಥಿತಿಯಲ್ಲಿದೆ, ಕೇವಲ ಪಿಕಪ್ ವಾಹನಕ್ಕೆ ಸಂಚರಿಸಲು ಮಾತ್ರ ಸಾಧ್ಯವಾಗುವಂತೆ ಇಟ್ಟುಕೊಂಡಿದ್ದಾರೆ ಮತ್ತು ಪ್ರವೇಶ ಸ್ಥಳದಲ್ಲೇ ದೊಡ್ಡ ಹೊಂಡ ಮಾಡಿ ಪ್ರವಾಸಿಗರು ತಮ್ಮ ಸ್ವಂತ ವಾಹನದಲ್ಲಿ ಪ್ರವೇಶಿಸಲು ಹೆದರುವಂತೆ ಮಾಡುತ್ತಾರೆ ಎಂದು ಆರೋಪಿಸುತ್ತಾರೆ ಪ್ರವಾಸಿಗರು.

ರಸ್ತೆಯಲ್ಲಿ ಹಲವು ಪಿಕಪ್ ಗಳು ಮಗುಚಿ ಬಿದ್ದು, ಪ್ರವಾಸಿಗರಿಗೆ ಗಾಯಗಳಾದ ಘಟನೆಯೂ ನಡೆದಿದೆ ಎನ್ನುತ್ತಾರೆ ಬೆಂಗಳೂರಿನ ಪ್ರವಾಸಿಗರೊಬ್ಬರು. ಪಿಕಪ್ ವಾಹನದವರು ಪ್ರವಾಸಿಗರೊಂದಿಗೆ ನಡೆದುಕೊಳ್ಳುವ ರೀತಿಯ ವಿರುದ್ಧ ದೂರು ನೀಡಲು ಅಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯೂ ಇದೆ. ಅಲ್ಲಿ ಪೊಲೀಸ್ ಠಾಣೆಯ ಮಾಹಿತಿ ಬೋರ್ಡ್ ಕೂಡ ಇಲ್ಲ. ಸ್ಥಳಿಯ ಪೊಲೀಸ್ ಸಿಬ್ಬಂದಿಯೂ ಅಲ್ಲಿ ಭದ್ರತೆಗಿಲ್ಲ .
ಪ್ರವಾಸಿ ತಾಣವನ್ನು ಈ ದಂಧೆಯಿಂದ ಮುಕ್ತಗೊಳಿಸಿ: ಪ್ರಸಿದ್ದ ಪ್ರವಾಸಿ ತಾಣವನ್ನು ಈ ದಂಧೆಯಿಂದ ಮುಕ್ತಗೊಳಿಸಿ ಸೂಕ್ತ ರಕ್ಷಣೆ ಸಿಕ್ಕಿದರೆ ಬರುವ ಪ್ರವಾಸಿಗರ ಸಂಖ್ಯೆಯೂ ಜಾಸ್ತಿಯಾಗಬಹುದು. ಸ್ವಲ್ಪ ದೂರ ರಸ್ತೆಯನ್ನು ಕಾಂಕ್ರಿಟಿಕರಣಗೊಳಿಸಿದರೆ ಪ್ರವಾಸಿಗರಿಗೂ ಮುಕ್ತವಾಗಿ ಈ ಬೆಟ್ಟದ ಸೊಬಗನ್ನು ವೀಕ್ಷಿಸಿಬಹುದು. ಸಕಲೇಶಪುರ ತಾಲ್ಲೂಕಿನ ಹಾಗೂ ಹಾಸನ ಗಡಿ ಭಾಗದಲ್ಲಿರುವ ಈ ಬಿಟ್ಟ ನೋಡುಗರನ್ನು ನಿಬ್ಬೆರಗಾಗಿಸದೇ ಇರದು. ಈ ಬೆಟ್ಟದ ವಿಶೇಷ ಎಂದರೆ ಹಾಸನ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿದೆ, ಈ ಮೂರು ಜಿಲ್ಲೆಗಳ ಗಡಿ ರೇಖೆಯನ್ನು ಈ ಬೆಟ್ಟ ಪ್ರತಿನಿಧಿಸುತ್ತದೆ. ಈ ಬೆಟ್ಟ ವೀಕ್ಷಣೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಪ್ರವಾಸಿಗರು ಆಗಮಿಸುತ್ತಾರೆ.
ಪಟ್ಲ ಬೆಟ್ಟದ ಮೇಲಿನಿಂದ ಒಂದು ದಿಕ್ಕಿಗೆ ಕೊಡಗು ಜಿಲ್ಲೆಯ ಮಲ್ಲಳ್ಳಿ ಜಲಪಾತ, ಇನ್ನೊಂದು ಕಡೆ ವೀವ್ ಪಾಯಿಂಟ ಕಾಣಿಸುತ್ತದೆ. ಬೆಟ್ಟದ ಎದುರಿಗೆ ಪುಷ್ಪಗಿರಿ ವನ್ಯದಾಮದ ಜೋಡಿ ಬೆಟ್ಟಗಳು ತಲೆ ಎತ್ತಿ ನಿಂತಿವೆ. ಈ ಎಲ್ಲಾ ಬೆಟ್ಟಗಳ ಸಾಲನ್ನು ಕುಮಾರ ಧಾರ ನದಿ ಸೀಳಿಕೊಂಡು ಹೋಗಿವೆ.