ಕುಟ್ರುಪ್ಪಾಡಿ ಗ್ರಾ.ಪಂ: ಘನತ್ಯಾಜ್ಯ ಘಟಕಕ್ಕೆ ಸ್ಥಳ ಕಾಯ್ದಿರಿಸಿ ಆದೇಶ ಹೊರಡಿಸಿದ ಪುತ್ತೂರು ಎಸಿ

ಕುಟ್ರುಪ್ಪಾಡಿ ಗ್ರಾ.ಪಂ: ಘನತ್ಯಾಜ್ಯ ಘಟಕಕ್ಕೆ ಸ್ಥಳ ಕಾಯ್ದಿರಿಸಿ ಆದೇಶ ಹೊರಡಿಸಿದ ಪುತ್ತೂರು ಎಸಿ

Kadaba Times News

ಕಡಬ ಟೈಮ್ಸ್(KADABA TIMES):ಕಡಬ : ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳಿಪ್ಪು ಎಂಬಲ್ಲಿ ಸ.ನಂಬ್ರ, 120/3 (ನಕ್ಷೆಯಂತೆ ಸ.ನಂ. 29/3ಪಿ2) ರಲ್ಲಿ 0 .50 ಎಕ್ರ ಸರಕಾರಿ ಜಮೀನನ್ನು ಘನತ್ಯಾಜ್ಯ ವಿಲೇವಾರಿ ಘಟಕದ ಉದ್ದೇಶಕ್ಕೆ ಕಾಯ್ದಿರಿಸಿ ಪುತ್ತೂರು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸಲ್ಲಿಸಿರುವ ಕೋರಿಕೆಯನ್ವಯ ಕಡಬ ತಹಶೀಲ್ದಾರರು ಪ್ರಸ್ತಾವನೆಯನ್ನು ತಯಾರಿಸಿ ವರದಿ ಸಲ್ಲಿಸಿದ್ದರು.ಉದ್ದೇಶಿತ ಜಾಗ   ಆಕ್ಷೇಪ ರಹಿತ ಜಮೀನಾಗಿದ್ದು  ಗ್ರಾ.ಪಂ ರಸ್ತೆಯಿಂದ 16 ಮೀ ಅಂತರದಲ್ಲಿದೆ.    ಜಮೀನಿನ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ  ವಾಸದ ಮನೆಗಳು ಹಾಗೂ ಕುಡಿಯುವ ನೀರಿನ ಮೂಲಗಳು ಇರುವುದಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿದ್ದರು.

ಇದೀಗ ಗ್ರಾಮ ಪಂಚಾಯತ್ ಕುಟ್ರುಪಾಡಿ ಕಡಬ ತಾಲೂಕು ಇವರ ಹೆಸರಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 71 ರಂತೆ  ಕಾಯ್ದಿರಿಸಿ ಆದೇಶಿಸಿದೆ. ಕಾಯ್ದಿರಿಸಿದ ಜಮೀನನ್ನು ಈ ಆದೇಶ ಹೊರಡಿಸಿದ 2 ವರ್ಷದೊಳಗೆ ಉದ್ದೇಶಿತ ವ್ಯವಸ್ಥೆಗೆ ಬಳಸಲು ನಿಯಾಮಾನುಸಾರ ಕ್ರಮವಹಿಸಲು ಕೋರಿದೆ.

ಪ್ರತಿಭಟನೆಗೆ ಸಂದ ಜಯ: ಘನತ್ಯಾಜ್ಯ  ಘಟಕಕ್ಕೆ ಸ್ಥಳ ಕಾಯ್ದಿರಿಸದ ಕಡಬ ತಹಸೀಲ್ದಾರ್ ಹಾಗೂ ಕಂದಾಯ ಇಲಾಖಾಧಿಕಾರಿಗಳ ವಿರುದ್ಧ ತಹಸೀಲ್ದಾರ್ ಕಛೇರಿ  ಎದುರು ಗ್ರಾ.ಪಂ ಅಧ್ಯಕ್ಷ ಮೋಹನ್ ಕೆರೆಕೋಡಿ ನೇತೃತ್ವದಲ್ಲಿ  ಗ್ರಾಮಸ್ಥರು,ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ  2021ರ ಅಕ್ಟೋಬರ್ ನಲ್ಲಿ ಪ್ರತಿಭಟನೆ ನಡೆಸಿದ್ದರು.ಕಡಬ ತಹಸೀಲ್ದಾರ್ ಅವರು ಜಾಗ ಮಂಜೂರು ಮಾಡದೆ ಅಸಡ್ಡೆ ಮಾಡುತ್ತಿದ್ದಾರೆ ಎಂದು  ಆರೋಪಿಸಲಾಗಿತ್ತು.

ಪಂಚಾಯಿತಿ ಘಟಕ ನಿರ್ಮಾಣ ಮಾಡಲು ತಯಾರಿದ್ದರೂ ತಹಸೀಲ್ದಾರ್ ಮಾತ್ರ ತಮ್ಮ ಜವಬ್ದಾರಿಯಿಂದ ವಿನಾಕಾರಣ ನುಣುಚಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದರು.ಅಲ್ಲದೆ ಜಾಗ ಮಂಜೂರು ಮಾಡುವಂತೆ ಕುಟ್ರುಪ್ಪಾಡಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾಗಿತ್ತು . ಇದೀಗ ಪ್ರತಿಭಟನೆ ನಡೆದು ಎಂಟು ತಿಂಗಳ ಬಳಿಕ ಜಾಗ ಮಂಜೂರು ಗೊಂಡಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top