




ಕಡಬ ಟೈಮ್ಸ್(KADABA TIMES):ನೆಲ್ಯಾಡಿ : ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು 100 ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ರಿಸುವುದಾಗಿ ಘೋಷಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 5 ಮತ್ತು ಉಡುಪಿ ಜಿಲ್ಲೆಯ 2 ಆರೋಗ್ಯ ಕೇಂದ್ರಗಳಿಗೆ ಮೇಲ್ದರ್ಜೆ ಭಾಗ್ಯ ದೊರಕಿದೆ.
ಕಡಬ ತಾಲೂಕಿನ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದರಲ್ಲಿ ಸೇರಿದೆ. ಉಳಿದಂತೆ ಬಂಟ್ವಾಳದ ಪುಂಜಾಲಕಟ್ಟೆ,ಬೆಳ್ತಂಗಡಿಯ ವೇಣೂರು, ಮೂಡುಬಿದಿರೆಯ ಶಿರ್ತಾಡಿ,ಪುತ್ತೂರಿನ ಪಾಣಾಜೆ,ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ, ಕುಂದಾಪುರದ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದೆ.
ಪ್ರತೀ ಕೇಂದ್ರಕ್ಕೂ 10 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿದೆ. ಇಲಾಖೆಯ ನಿಯಮದ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳೆಂದರೆ 6 ಬೆಡ್‌ಗಳಿರುತ್ತವೆ. ಆದರೆ ಇಲ್ಲಿ ಒಳರೋಗಿಗಳಾಗಿ ದಾಖಲಾಗಲು ಅವಕಾಶಗಳಿಲ್ಲ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 30 ಬೆಡ್‌ಗಳಿದ್ದು, ಜತೆಗೆ ಸಾಮಾನ್ಯ ಕಾಯಿಲೆಯ ರೋಗಿಗಳನ್ನು ಒಳರೋಗಿಗಳಾಗಿ ದಾಖಲಿಸುವುದಕ್ಕೂ ಅವಕಾಶವಿದೆ.

ಪ್ರಸ್ತುತ ಈ 7 ಆರೋಗ್ಯ ಕೇಂದ್ರಗಳು 30 ಬೆಡ್‌ಗಳೊಂದಿಗೆ ಮೇಲ್ದರ್ಜೆಗೇರಲಿವೆ. ಆಸ್ಪತ್ರೆಯ ಕಟ್ಟಡದ ಜತೆಗೆ ವೈದ್ಯರು, ಸಿಬಂದಿ ವಸತಿ ಕಟ್ಟಡವೂ ಒಳಗೊಂಡಿರುತ್ತದೆ.ಕಟ್ಟಡ ನಿರ್ಮಾಣದ ಬಳಿಕ ಸಮುದಾಯ ಕೇಂದ್ರಕ್ಕೆ ಬೇಕಾಗುವ ಎಲ್ಲ ಸಲಕರಣೆಗಳ ವ್ಯವಸ್ಥೆ, ಹೆಚ್ಚುವರಿ ವೈದ್ಯರು, ಸಿಬಂದಿಯ ನೇಮಕಾತಿ ನಡೆಯಲಿದೆ.
ಪ್ರಸ್ತುತ ಡಿಪಿಆರ್ ಹಂತದಲ್ಲಿದ್ದು ಅನುದಾನ ಬಿಡುಗಡೆಗೊಂಡ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. ಉಭಯ ಜಿಲ್ಲೆಗಳ ಕಾಮಗಾರಿಯನ್ನು ಮಂಗಳೂರು ಉಪವಿಭಾಗವೇ ನೋಡಿಕೊಳ್ಳಲಿದೆ.