




ಕಡಬ ಟೈಮ್ಸ್(KADABA TIMES):ಸುಳ್ಯ ವಿಧಾನ ಸಭಾ ಕ್ಷೇತ್ರ: ದಲಿತ ಸಮುದಾಯದ ಹಿರಿಯ ಸಚಿವ, ಸತತ 6 ಭಾರಿ ಗೆದ್ದ ಸುಳ್ಯ ಕ್ಷೇತ್ರದ ಜನಪ್ರಿಯ ಶಾಸಕ ಎಸ್ ಅಂಗಾರರನ್ನು ರಾಜಕೀಯವಾಗಿ ಬದಿಗೆ ಸರಿಸುವ ವ್ಯವಸ್ಥಿತ ಕಾರ್ಯ ಸ್ವಪಕ್ಷೀಯರ ಒಂದು ಬಣದಿಂದ ನಡೆಯುತ್ತಿದೆ.
ಈ ವಿಚಾರವನ್ನು ಸುಳ್ಯ ರಾಜಕೀಯ ಪಡಸಾಲೆಯಲ್ಲಿ ಗುಟ್ಟಾಗಿ ಉಳಿಸಲು ಪ್ರಯತ್ನಿಸಿದರೂ ಸಾಮಾಜಿಕ ಮಾಧ್ಯಮ ಹಾಗೂ ವಿರೋಧಿಗಳ ಕಾರ್ಯತಂತ್ರದಿಂದ ಬಯಲಾಗುತ್ತಿದೆ. ಗ್ರಾಮದ ಮೂಲ ಸೌಕರ್ಯಕ್ಕಾಗಿ ಕಾರ್ಯಕರ್ತರೇ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಕ್ಷೇತ್ರದಲ್ಲಿ ಒದಗಿ ಬಂದಿದೆ . ರಸ್ತೆ, ಸೇತುವೆ, ಶಾಲೆ, ಆರೋಗ್ಯ ಇತ್ಯಾದಿ ಮೂಲಭೂತ ಸೌಕರ್ಯದಲ್ಲಿ ಸುಳ್ಯ ಬಹಳಷ್ಟು ಹಿಂದಿದ್ದು, ಇದರ ಪೂರೈಸುವಲ್ಲಿಯೂ ಅಂಗಾರರು ಗಮನಾರ್ಹ ಪ್ರಗತಿ ಸಾಧಿಸಿಲ್ಲ ಎಂಬ ಆರೋಪಗಳು ಸಚಿವರ ವಿರೋಧಿ ಬಣದ್ದು. ಹೀಗಾಗಿ ಅವರನ್ನು ಬದಲಾಯಿಸಬೇಕು ಎಂಬ ಕೂಗು ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರ ಮಧ್ಯೆ ಧ್ವನಿಸುತ್ತಿದ್ದು ಇದಕ್ಕೆ ತುಪ್ಪ ಸುರಿಯುವ ಕಾರ್ಯವನ್ನು ಬಿಜೆಪಿಯಲ್ಲಿರುವ ಅಂಗಾರರ ವಿರೋಧಿ ಬಣ ಮಾಡುತ್ತಿದೆ.
ಬೂದಿ ಮುಚ್ಚಿದ ಕೆಂಡ:ಕಳೆದ ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ ಸುಳ್ಯ ಬಿಜೆಪಿ ಒಡೆದ ಮನೆಯಾಗಿತ್ತು. ಇದು ಬಳಿಕ ನಡೆದ ಪಂಚಾಯತ್ ಚುನಾವಣೆಯಲ್ಲೂ ಇದು ಪ್ರತಿಧ್ವನಿಸಿ ಬಂಡಾಯ, ಅಮಾನತು ಉಚ್ಚಾಟನೆ ಇತ್ಯಾದಿಗಳೆಲ್ಲ ನಡೆದು ಕೊನೆಗೆ ಇದಕ್ಕೆ ಮುಲಾಮ್ ಹಚ್ಚುವಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ನೇತ್ರತ್ವದ ಜಿಲ್ಲಾ ಬಿಜೆಪಿ ಯಶಸ್ವಿಯಾಗಿತ್ತು. ಆದರೇ ಮೇಲ್ನೋಟಕ್ಕೆ ಗಾಯ ಮಾಸಿದರೂ ಬೂದಿ ಮುಚ್ಚಿದ ಕೆಂಡದಂತೆ ಉಳಿದುಕೊಂಡಿದೆ.
ಅಂಗಾರರಿಗಿಂತ ಬೆಟರ್ ಕ್ಯಾಂಡಿಡೇಟ್?: ಪಕ್ಷದ ಮುಖಂಡರ ಸೂಚನೆಯ ಮೇರೆಗೆ ಸಚಿವರು ತನ್ನ ಅತ್ಯಾಪ್ತ ಬಳಗದಲ್ಲಿದ್ದ ವ್ಯಕ್ತಿಯೊಬ್ಬರನ್ನು ದೂರವಿರಿಸಿದ್ದಾರೆ. ಇದರಿಂದ ಅವರೀಗ ಅಂಗಾರರ ವಿರುದ್ದ ಮುನಿಸಿಕೊಂಡು ಅತೃಪ್ತ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಆ ವಿರೋಧಿ ಬಣವು ಬಿಜೆಪಿಯ ಮತ್ತೊಬ್ಬ ಪರಿಶಿಷ್ಟ ಜಾತಿಯ ನಾಯಕನನ್ನು ಅಂಗಾರ ರ ವಿರುದ್ದ ಅಭ್ಯರ್ಥಿಯಾಗಿ ಬಿಂಬಿಸಲು ಯತ್ನಿಸುತ್ತಿದೆ. ಎನ್ನುವುದು ಕೆಲ ಬೆಳವಣಿಗೆಯಿಂದ ಕಂಡು ಬರುತ್ತಿದೆ.
ತಾಲೂಕು ಪಂಚಾಯತಿನಲ್ಲಿ ಆಯಕಟ್ಟಿನ ಸ್ಥಾನವನ್ನು ಅಲಂಕರಿಸಿದ್ದ ಹಾಗೂ ಪಕ್ಷದಲ್ಲಿ ಈಗಲೂ ಪ್ರಮುಖ ಹುದ್ದೆಯಲ್ಲಿರುವ ಅವರ ಬಯೋಡೆಟಾ ತಯಾರಿಸಿರುವ ಈ ತಂಡ ಅವರ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಪ್ರಚಾರದಲ್ಲಿ ತೊಡಗಿಸಿದೆ. ಅತ್ಯುತ್ತಮ ಶೈಕ್ಷಣಿಕ ಹಿನ್ನಲೆ ಹಾಗೂ ಅಡಳಿತ ಅನುಭವ ಇರುವ ಮುಖಂಡ ಅಂಗಾರರಿಗಿಂತ ಬೆಟರ್ ಕ್ಯಾಂಡಿಡೇಟ್ ಎಂದು ಬಿಂಬಿಸಲು ಹೊರಟಿದೆ.

ಭಿನ್ನಮತೀಯ ತಂಡದ ಪ್ರಯತ್ನಕ್ಕೆ ಸಂಘದ ಹಿರಿಯರೊಬ್ಬರು ಕೈ ಜೋಡಿಸಿರುವುದು ಗೊತ್ತಾಗಿದೆ. ಅವರಿಗೆ ಸಚಿವರ ಬಗ್ಗೆ ಪ್ರೀತಿ ಇದ್ದರೂ , ಈ ಬಾರಿ ಗೆಲ್ಲುವುದು ಕಷ್ಟ ಎಂಬ ವರದಿ ಅವರ ಕೈ ಸೇರಿದ ಬಳಿಕ , ಕ್ಷೇತ್ರದಲ್ಲಿ ಪಕ್ಷದ ಹಿಡಿತ ಕೊನೆಯಾಗಬಾರದು ಎಂಬ ಹಿನ್ನಲೆಯಲ್ಲಿ ಅವರು ಹೊಸ ನಾಯಕನ ಪ್ರಚಾರದದ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಇತ್ತೀಚೆಗೆ ಬಿಜೆಪಿಯ ಕೇಂದ್ರ ಹೈಕಮಾಂಡ್ ಎರಡು ಪ್ರತ್ಯೇಕ ಖಾಸಗಿ ತಂಡಗಳ ಮೂಲಕ ರಾಜ್ಯವ್ಯಾಪಿ ಚುನಾವಣಾ ಸಮೀಕ್ಷೆ ನಡೆಸಿದೆ ಎನ್ನಲಾಗಿದೆ . ಅದರಲ್ಲಿ ಸುಳ್ಯ ಬಿಜೆಪಿಯ ಮಟ್ಟಿಗೆ ಡೆಂಜರ್ ಝೋನ್ ನಲ್ಲಿ ಕಾಣಿಸಿದೆ. ಸುಳ್ಯದಲ್ಲಿ ಪಕ್ಷ ತಳಮಟ್ಟದಲ್ಲಿ ಗಟ್ಟಿಯಾಗಿದ್ದರೂ ಅಂಗಾರರ ವಿರುದ್ದವಾಗಿರುವ ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿ ಪಕ್ಷಕ್ಕೆ ಹಿನ್ನಡೆಯನ್ನುಂಟು ಮಾಡಬಹುದು ಎಂದು ಅದು ತಿಳಿಸಿರುವುದಾಗಿ ವರದಿಯಾಗಿದೆದೆ. ಹೀಗಾಗಿಯೇ ಸುಳ್ಯದ ರಾಜಕೀಯ ಪಲ್ಲಟಗಳ ಬಗ್ಗೆ ಹಾಗೂ ಬಿಜೆಪಿಯ ಕಾರ್ಯಶೈಲಿಯ ಬಗ್ಗೆ ಹದ್ದಿನ ಕಟ್ಟಿರುವ ಸಂಘದ ಮುಖಂಡ ಅಭ್ಯರ್ಥಿ ಬದಲಾವಣೆಗೆ ಮನ ಮಾಡಿದ್ದು , ಅವರ ನಿರ್ಧಾರ ಸುಳ್ಯದಲ್ಲಿ ಪಕ್ಷದ ಮಟ್ಟಿಗೆ ವೇದವಾಕ್ಯ ಎಂದು ಹೇಳಲಾಗುತ್ತಿದೆ
28 ವರ್ಷಗಳ ಸುದೀರ್ಘ ಶಾಸಕತ್ವ: 1994ರಿಂದ ಸುಳ್ಯ ಕ್ಷೇತ್ರದ ಶಾಸಕರಾಗಿರುವ ಅಂಗಾರರು ಜನಾನುರಾಗಿ ಹಾಗೂ ಅಜಾತ ಶತ್ರು ಎಂದೇ ಖ್ಯಾತರು. 1990ರ ಬಳಿಕ ಮೊದಲ ಬಾರಿ ಶಾಸಕರಾದ ದ.ಕ ಜಿಲ್ಲೆಯ ಶಾಸಕರುಗಳ ಪೈಕಿ ಸತತ ಆರು ಬಾರಿ ಗೆದ್ದ ಉದಾಹರಣೆ ಇರುವುದು ಅಂಗಾರರದು ಮಾತ್ರ. ಸುಳ್ಯದಲ್ಲಿ ಅಂಗಾರರನ್ನು ಕಾಂಗ್ರೇಸ್ಸಿಗೆ ಸೋಲಿಸಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂಗಾರರ ವೈಯುಕ್ತಿಕ ವರ್ಚಸ್ಸು.
ಆದರೇ 28 ವರ್ಷಗಳ ಸುದೀರ್ಘ ಶಾಸಕತ್ವದ ಅವಧಿಯ ಬಳಿಕ ಮೊದಲ ಬಾರಿಗೆ ಅವರ ವಿರುದ್ದ ಅಡಳಿತ ವಿರೋಧಿ ಅಲೆಯೊಂದು ಬಹುತೇಕ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದು, ಆದರೇ ಕಳೆದ ಹಲವು ಬಾರಿ ಅದು ಸ್ಪೋಟಗೊಂಡು ಬಹಿರಂಗಗೊಂಡ ಉದಾಹರಣೆಯು ಇದೆ. ಈ ಬಾರಿ ಅವರು ಸಚಿವರೂ ಆಗಿರುವುದರಿಂದ ಅವರ ಬಗ್ಗೆ ಕ್ಷೇತ್ರದ ಜನತೆಗೆ ಅತೀವವಾದ ನಿರೀಕ್ಷೆಗಳಿವೆ. ಆ ನಿರೀಕ್ಷೆಗೆ ತಕ್ಕ ಕೆಲಸಗಳು ಸುಳ್ಯದಲ್ಲಿ ಆಗಿರುವುದು ಕಂಡು ಬರುವುದಿಲ್ಲ, ಇದರ ಜತೆಗೆ ಅಂಗಾರರು ಕೂಡ ಜನರ ನಡುವಿನ ಸಂಪರ್ಕವನ್ನು ಕಡಿಮೆ ಮಾಡಿದ್ದಾರೆ. ಕಾರ್ಯಕರ್ತರಿಗೆ ಹಾಗೂ ಜನರಿಗೆ ಸುಲಭದಲ್ಲಿ ಸಿಗುವುದಿಲ್ಲ. ಸಭೆ ಸಮಾರಂಭ ಕಾರ್ಯಕ್ರಮಗಳಲ್ಲಿ ಮೊದಲಿನಷ್ಟು ಭಾಗವಹಿಸುತ್ತಿಲ್ಲಎನ್ನುವ ಆರೋಪಗಳು ಪಕ್ಷದ ಕಾರ್ಯಕರ್ತರ ವಲಯದಿಂದ ಕೇಳಿ ಬಂದಿದೆ.