




ಕಡಬ ಟೈಮ್ಸ್ (KADABA TIMES):ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ವಿರೋಧಿಸಿ ಹಾಗೂ ಕೂಡಲೇ ರಾಷ್ಟ್ರೀಯ ಹೆದ್ದಾರಿಯ ದುರಸ್ತಿಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ವತಿಯಿಂದ ಉಪ್ಪಿನಂಗಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯನ್ನು ತಡೆದ ಪ್ರತಿಭಟನಕಾರರು, ಸರಕಾರ, ಸಂಸದರು, ಶಾಸಕರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಚಾರ ಅಸಾಧ್ಯವಾಗಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿಯೂ ಅಪೂರ್ಣವಾಗಿದ್ದು, ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರು ಮರಗಳನ್ನು ಕಡಿದು, ಗುಡ್ಡಗಳನ್ನು ಜರಿಸುವ ಕೆಲಸ ಮಾತ್ರ ಮಾಡಿಟ್ಟಿದ್ದಾರೆ. ಹೆದ್ದಾರಿಯ ಬಳಿ ಅಲ್ಲಲ್ಲಿ ಅಗೆದಿದ್ದು, ಇದರಿಂದಲೂ ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಹೆದ್ದಾರಿ ಅವ್ಯವಸ್ಥೆಯು ಹಲವು ಅಪಘಾತಗಳಿಗೆ, ಸಾವು- ನೋವುಗಳಿಗೆ ಕಾರಣವಾಗಿದ್ದರೂ, ಸರಕಾರ ಈ ಬಗ್ಗೆ ಮೌನ ವಹಿಸಿದೆ. ಹಿಂದಿ ಭಾಷೆ ಬಾರದ ನಮ್ಮ ಸಂಸದರು ಇಲ್ಲಿನ ಪರಿಸ್ಥಿತಿಯನ್ನು ಕೇಂದ್ರಕ್ಕೆ ಮುಟ್ಟಿಸುವಲ್ಲಿ ಸೋತಿದ್ದಾರೆ.

ತುರ್ತಾಗಿ ರೋಗಿಗಳನ್ನು, ಗಭೀಣಿಯರನ್ನು ಆಸ್ಪತ್ರೆಗಳಿಗೆ ಸಾಗಿಸಲು ಕೂಡಾ ಹೆದ್ದಾರಿಯಲ್ಲಿರುವ ಹೊಂಡ- ಗುಂಡಿಗಳಿಂದ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಶೀಘ್ರವಾಗಿ ವ್ಯವಸ್ಥಿತವಾಗಿ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭಿಸದಿದ್ದರೆ, ಹೊಂಡ- ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ಸುಸ್ಥಿತಿಯಲ್ಲಿರಿಸಲು ಮುಂದಾಗದಿದ್ದಲ್ಲಿ ಎಸ್‌ಡಿಪಿಐ ವಿವಿಧ ಸಂಘಟನೆ, ನಾಗರಿಕರು ಸಹಕಾರದೊಂದಿಗೆ ಸಂಪೂರ್ಣವಾಗಿ ಹೆದ್ದಾರಿ ತಡೆ ನಡೆಸಿ ಬೃಹತ್ ಹೋರಾಟವನ್ನು ಸಂಘಟಿಸುವುದಾಗಿ ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯನ್ನು ಮಾತ್ರ ಪ್ರತಿಭಟನಕಾರರು ತಡೆದಿದ್ದರಿಂದ ಇನ್ನೊಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹಾಗೂ ಪ್ರೊಬೆಷನರಿ ಐಪಿಎಸ್ ಅಧಿಕಾರಿ ರೋಹನ್ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.